ಕರಾವಳಿಯ ಜನರ ಹಾಸ್ಯಕ್ಕೊಂದು ವಸ್ತುವಾಗಿದ್ದ ರಾಂಪಣ್ಣ ಯಾನೆ ರಾಮಪ್ಪ ಪೂಜಾರಿಯವರ ಬಗ್ಗೆ ಒಂದು ಉತ್ತಮ ಲೇಖನ.
ನೀವು ಕರಾವಳಿಯ ಯಾರಲ್ಲಾದರೂ ‘ರಾಮಪ್ಪ ಪೂಜಾರಿ ನಿಮಗೆ ಗೊತ್ತಾ ?’ ಎಂದು ಕೇಳಿ. ಯಾವ ‘ರಾಮಪ್ಪ ?’ ಎಂದು ನಿಮ್ಮನ್ನುಮರು ಪ್ರಶ್ನಿಸುತ್ತಾರೆ. ಈಗ ನಿಮ್ಮ ಪ್ರಶ್ನೆಯನ್ನು ತುಸು ಬದಲಿಸಿ. ‘ರಾಂಪ ನಿಮಗೆ ಗೊತ್ತಾ ?’ ಎಂದು ಕೇಳಿ. ಆತನ ಮುಖ ಒಮ್ಮೆಲೇಅರಳುತ್ತದೆ. ಅದಷ್ಟೇ ಸಾಕು ‘ರಾಂಪ’ ಎನ್ನುವ ಹೆಸರಿನ ಜನಪ್ರಿಯತೆಯನ್ನು ಊಹಿಸಲು. ಕರಾವಳಿಯ ಪುಟ್ಟ ಮಗುವಿನಿಂದಹಿಡಿದು, ಹಣ್ಣು ಮುದುಕನವರೆಗೂ ‘ರಾಂಪ’ ಎಂದರೆ ಗೊತ್ತು. ಇವರೆಲ್ಲರೂ ಒಂದಲ್ಲ ಒಂದು ಕ್ಷಣದಲ್ಲಿ ‘ರಾಂಪನ ಜೋಕು’ಗಳನ್ನುಹೇಳಿಕೊಂಡು ನಕ್ಕಿದ್ದಾರೆ. ಆದರೆ ಇವರಾರಿಗೂ ರಾಮಪ್ಪ ಪೂಜಾರಿ ಗೊತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ರಾಂಪ ಮತ್ತು ರಾಮಪ್ಪಪೂಜಾರಿ ಒಂದೇ ವ್ಯಕ್ತಿಯ ಹೆಸರುಗಳು ಎನ್ನುವುದೂ ಗೊತ್ತಿಲ್ಲ. ಇವರು ತಮಾಷೆ ಮಾಡಿ ನಕ್ಕಿರುವುದು ಸ್ವತಃ ತಮ್ಮನ್ನೇ ತಾವುಅಣಕಿಸಿ ಎನ್ನುವುದು ಕೂಡ ಗೊತ್ತಿಲ್ಲ.
ಕರಾವಳಿಯಲ್ಲಿ ಮೇಲ್ವರ್ಣೀಯ ಮತ್ತು ಮೇಲ್ವರ್ಗದ ಜಾತಿ ರಾಜಕಾರಣಕ್ಕೆ ಬಲಿಯಾದ ಹತ್ತು ಹಲವು ಗಣ್ಯರಲ್ಲಿ ಈ ರಾಮಪ್ಪಣ್ಣರೂಒಬ್ಬರು. ಒಂದು ವೇಳೆ ರಾಮಪ್ಪ ಪೂಜಾರಿಯವರು ಮೇಲ್ವರ್ಣೀಯನಾಗಿ ಹುಟ್ಟಿದ್ದಿದ್ದರೆ ಇಂದು ಮಂಗಳೂರಿನಲ್ಲಿ ಅವರಹೆಸರಿನಲ್ಲೊಂದು ಸ್ಮಾರಕ ಇರುತ್ತಿತ್ತೋ ಏನೋ. ಒಂದು ಕಾಲದಲ್ಲಿ ‘ಉಡುಪಿ ಹೊಟೇಲ್’ ಮಾಡಿ ಹೆಸರು ಪಡೆದ ಅದೆಷ್ಟೋಮೇಲ್ಜಾತಿ ಜನರನ್ನು ಕರಾವಳಿಯ ಜನರು ನೆನಪಿಸಿಕೊಳ್ಳುತ್ತಾರೆ. ಅವರು ಯಾವ ಸಮಾಜ ಸೇವೆ ಮಾಡದಿದ್ದರೂ ಕೂಡ. ಆದರೆಹೊಟೇಲ್ ಉದ್ಯಮದಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ, ರಾಜಕೀಯದಲ್ಲಿ ಒಬ್ಬ ಅನಕ್ಷರಸ್ಥ, ಶೂದ್ರ ವರ್ಗದ ಬಿಲ್ಲವನೊಬ್ಬಸಾಧಿಸಿದ ಸಾಧನೆಯನ್ನು ಸಹಿಸದ ಶಕ್ತಿಗಳು ಆತನ ಒಳ್ಳೆಯತನವನ್ನು, ಸಮಾಜಸೇವೆಯನ್ನು ತಮಾಷೆಯ ವಸ್ತುವಾಗಿಸಿ, ಆತನನ್ನುಸಂಪೂರ್ಣ ಮುಗಿಸಿ ಬಿಡಲು ಹವಣಿಸಿದವು. ಹೊಟೇಲ್ ಉದ್ಯಮದಲ್ಲಿ ಒಳ್ಳೆಯತನ, ಸಮಾಜಸೇವೆ, ಮಾನವೀಯತೆ ಇತ್ಯಾದಿವೌಲ್ಯಗಳನ್ನು ಬಿತ್ತಲು ರಾಮಪ್ಪ ಪೂಜಾರಿಯವರು ನಡೆಸಿದ ವಿಫಲ ಪ್ರಯತ್ನದ ಕಾರಣಕ್ಕಾಗಿ ಇಂದು ಅವರು ‘ರಾಂಪ’ನಾಗಿಜನರಿಂದ ತಮಾಷೆಗೊಳಪಡಬೇಕಾಯಿತು. ಈ ಹುನ್ನಾರಗಳನ್ನು, ರಾಜಕೀಯವನ್ನು ಅರಿಯದ ಶೂದ್ರ ತರುಣರೇ, ಅವರ ಹೆಸರಿನಲ್ಲಿ‘ಜೋಕು’ಗಳನ್ನು ಹೇಳಿಕೊಂಡು ಇಂದು ಮೇಲ್ವರ್ಗದ ಜನರನ್ನು ನಗಿಸುತ್ತಿದ್ದಾರೆ.
ರಾಮಪ್ಪ ಪೂಜಾರಿಯವರನ್ನು ಮೇಲೆತ್ತಿದ್ದು ಯಾವ ಮೀಸಲಾತಿಯೂ ಅಲ್ಲ. ಮೇಲ್ವರ್ಗದ ಜನರ ಅನುಕಂಪವೂ ಅಲ್ಲ. ನಾಲ್ಕಕ್ಷರವೂ ಗೊತ್ತಿಲ್ಲದ ರಾಮಪ್ಪ ಪೂಜಾರಿ ಎರಡು ದೊಡ್ಡ ಮಾಂಸಾಹಾರಿ ಹೊಟೇಲ್‌ಗಳನ್ನು ಆರಂಭಿಸಿ ಮಂಗಳೂರಿನಹೊಟೇಲ್ ಉದ್ಯಮವನ್ನು ಅಲ್ಲಾಡಿಸಿದವರು. ರಾಮಪ್ಪನವರು ಹುಟ್ಟಿದ್ದು 1925ರಲ್ಲಿ, ಸೋಂಪ ಪೂಜಾರಿ ಮತ್ತು ದುಗ್ಗೆಪೂಜಾರ್ತಿಯವರ ಮಗನಾಗಿ. ಆಗ ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮುದಾಯ ಅದೆಷ್ಟು ಕೆಟ್ಟ ಪರಿಸ್ಥಿತಿಯಲ್ಲಿತ್ತೆಂದರೆ, ಅಕ್ಷರವೆನ್ನುವುದು ಅವರ ಪಾಲಿಗೆ ಕನಸಾಗಿತ್ತು. ಊರಿಗೆ ಉಣಿಸಲು ಹೊಟೇಲು ಇಡುವುದಿರಲಿ, ಒಂದು ಹೊತ್ತಿನ ಊಟ ಸಿಕ್ಕಿದರೆಅದವರ ಭಾಗ್ಯವಾಗಿತ್ತು. ಮನೆಯ ಪರಿಸ್ಥಿತಿ ತೀರ ಕೆಟ್ಟಾಗ ತನ್ನ 14ನೆ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ, ಮಂಗಳೂರಿಗೆ ಬಂದರು. ಕಂಕನಾಡಿಯ ರೆಸ್ಟೋರೆಂಟೊದರಲ್ಲಿ ಗ್ಲಾಸು ತೊಳೆಯುವ ಮೂಲಕ ಹೊಟೇಲ್ ಬದುಕನ್ನು ಆರಂಭಿಸಿದರು. ಅಲ್ಲಿಂದ ಅವರಬದುಕು ಚಿಗುರತೊಡಗಿತು. ತನ್ನ ಶ್ರಮದಿಂದಲೇ ಹೊಟೇಲ್ ಮಾಲಕರ ಹೃದಯ ಗೆದ್ದ ರಾಮಪ್ಪ ವರ್ಷಗಳ ಬಳಿಕ ತನ್ನದೇ ಆದಒಂದು ಹೊಟೇಲನ್ನು ಕಂಕನಾಡಿಯಲ್ಲಿ ಆರಂಭಿಸಿದರು. ಆಮೇಲೆ ಅದು ಕಂಕನಾಡಿ ರೆಸ್ಟೋರೆಂಟ್ ಎಂದೇ ಹೆಸರು ಪಡೆದುಜನಪ್ರಿಯವಾಯಿತು. ಬಳಿಕ ಹಂಪನಕಟ್ಟೆಯಲ್ಲಿ ರಾಜ್‌ಕಮಲ್ ಎಂಬ ಹೊಟೇಲ್ ಆರಂಭಿಸಿದರು. ಅವರು ಸುತ್ತಲಿನ ಹೊಟೇಲ್ಉದ್ಯಮಿಗಳು ಅಚ್ಚರಿ ಪಡೆಯುವ ವೇಗದಲ್ಲಿ ಬೆಳೆಯ ತೊಡಗಿದರು. ಜಪ್ಪಿನಮೊಗರಿನಲ್ಲಿ ಬೃಹತ್ ಬಂಗಲೆಯನ್ನು ಕಟ್ಟಿದರುಮಾತ್ರವಲ್ಲ, ಪರಿಸರದಲ್ಲಿ ಮೊತ್ತ ಮೊದಲು ವಿದ್ಯುತ್, ದೂರವಾಣಿ ಭಾಗ್ಯ ಕಂಡ ಮನೆ ಅವರದಾಗಿತ್ತು.
ಹಸಿವಿನ ಕುರಿತು ಅವರಿಗೆ ಚೆನ್ನಾಗಿ ಪರಿಚಯವಿತ್ತು. ಆದುದರಿಂದಲೇ ಅವರಿಗೆ ಹೊಟೇಲ್ ಎನ್ನುವುದು ಬರೇ ಒಂದುದಂಧೆಯಾಗಿರಲಿಲ್ಲ. ಮಂಗಳೂರಿನ ಹೊಟೇಲ್ ಉದ್ಯಮದಲ್ಲೇ ಮೊತ್ತ ಮೊದಲ ಬಾರಿಗೆ 5 ರೋಪಾಯಿಗೆ ಹೊಟ್ಟೆ ತುಂಬಾ ಊಟಎಂದು ಘೋಷಿಸಿದರು. ಯಾವನೇ ಬಂದು 5 ರೂ. ಕೊಟ್ಟು ಎಷ್ಟು ಬೇಕಾದರೂ ಉಣ್ಣಬಹುದು. ಎಕ್ಸ್‌ಟ್ರಾ ಊಟಕ್ಕೆ ಚಾರ್ಜಿಲ್ಲಎಂಬ ನಿಯಮವನ್ನು ತಮ್ಮ ಹೊಟೇಲ್‌ನಲ್ಲಿ ಜಾರಿಗೆ ತಂದರು. ಇದು ಕರಾವಳಿಯಾದ್ಯಂತ ಭಾರೀ ಜನಪ್ರಿಯತೆಯನ್ನು ಪಡೆಯಿತು. ಇದೇ ಸಂದರ್ಭದಲ್ಲಿ ಊಟ ಮಾಡಿದವರು ಹೊಟ್ಟೆ ತುಂಬಾ ಉಂಡು ಅನ್ನವನ್ನು ತಟ್ಟೆಯಲ್ಲಿ ಉಳಿಸಿ ಹೂಗುವುದನ್ನುಗಮನಿಸಿದರು. ಇದನ್ನು ಸಹಿಸದ ರಾಮಪ್ಪ ತಟ್ಟೆಯಲ್ಲಿ ಊಟ ಬಿಟ್ಟರೆ 50 ಪೈಸೆ ದಂಡ ಎಂಬ ನೋಟಿಸನ್ನು ಹೊಟೇಲ್‌ನೊಳಗೆಹಾಕಿದರು. ಮಂಗಳೂರಿಗೆ ಬರುವ ಹಳ್ಳಿಯ, ದೂರದ ಕೇರಳದ ಜನರಿಗೆ ರಾಮಪ್ಪ ಪೂಜಾರಿಯವರ ಹೊಟೇಲ್ ಅಚ್ಚುಮೆಚ್ಚಿನಹೊಟೇಲಾಗಿತ್ತು. ತನ್ನ ಹೊಟೇಲ್‌ನಲ್ಲಿ ಬಡವರಿಗೆ ರಿಯಾಯಿತಿಯಲ್ಲಿ ಅನ್ನವನ್ನು ನೀಡುತ್ತಿದ್ದರು. ಸ್ಥಳೀಯ ಮಿಲಾಗ್ರಿಸ್ ಶಾಲೆಯವಿದ್ಯಾರ್ಥಿಗಳಿಗೂ ಊಟದಲ್ಲಿ ರಿಯಾಯಿತಿ ಇರುತ್ತಿತ್ತು. ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಮಪ್ಪ ಪೂಜಾರಿ ಮಕ್ಕಳದಿನಾಚರಣೆ, ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಸಿಹಿ ಹಂಚುವುದನ್ನು ಒಂದು ಸಂಪ್ರದಾಯವನ್ನಾಗಿ ಮಾಡಿಕೊಂಡಿದ್ದರು. ಶಾಲೆಗಳಿಗೆ ಅಪಾರ ಧನಸಹಾಯವನ್ನು ಮಾಡುತ್ತಿದ್ದರು. ಗೋಕರ್ಣನಾಥ ಶಾಲೆಗೆ ಆ ಕಾಲದಲ್ಲೇ ಒಂದು ಲಕ್ಷ ರೂಪಾಯಿ ದಾನವಾಗಿನೀಡಿದ್ದರು. ಕೋಳಿ ಅಂಕ, ಕಂಬಳ ಇವರ ಪ್ರೀತಿಯ ತುಳು ಕ್ರೀಡೆಗಳಾಗಿದ್ದವು. ಇದಕ್ಕಾಗಿ ಅಪಾರ ಹಣ ವೆಚ್ಚ ಮಾಡುತ್ತಿದ್ದರು. ನೇಮ, ತುಳು ದೈವಗಳಿಗಾಗಿಯೂ ಹಣವನ್ನು ಚೆಲ್ಲುತ್ತಿದ್ದರು.
ರಾಮಪ್ಪ ಪೂಜಾರಿ ಮಂಗಳೂರಿನ ಉಳಿದ ‘ಉಡುಪಿ ಹೊಟೇಲ್’ ಸೇರಿದಂತೆ ಗಣ್ಯ ಹೊಟೇಲ್ ಉದ್ಯಮಿಗಳಿಗೆ ತಲೆನೋವಾಗಿಪರಿಣಮಿಸಿದರು. ಇಂತಹ ಸಂದರ್ಭದಲ್ಲೇ, ಹೊಟೇಲ್‌ನಲ್ಲಿ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ, ಅನ್ನ ಬಿಟ್ಟರೆ ಅದಕ್ಕೆ ದಂಡಇತ್ಯಾದಿ ಕ್ರಮವನ್ನು ತಮಾಷೆ ಮಾಡಲು ಆರಂಭಿಸಿದರು. ರಾಮಪ್ಪ ಪೂಜಾರಿ ಅದೆಷ್ಟು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದರೂ, ಅವರ ಅನಕ್ಷರತೆ, ಜಾತಿ ತಮಾಷೆಗೆ ವಸ್ತುವಾಯಿತು. ಅವರ ಒಳ್ಳೆಯತನ, ಮಾನವೀಯತೆಗಳೆಲ್ಲ ಇವರಿಗೆ ಹಾಸ್ಯಸ್ಪದಎನ್ನಿಸತೊಡಗಿತ್ತು. ಹೀಗೆ ರಾಮಪ್ಪ ಪೂಜಾರಿಯನ್ನು ಮಟ್ಟ ಹಾಕಲು ಒಂದು ಸಂಚಿನ ರೂಪದಲ್ಲಿಯೇ ಅವರ ವಿರುದ್ಧ ‘ಜೋಕು’ಗಳುಹುಟ್ಟಿಕೊಂಡವು. ಅವು ಎಷ್ಟು ವ್ಯಾಪಕವಾಗಿ ಹರಡತೊಡಗಿದವು ಎಂದರೆ, ಕೆಲ ಜನರು ರಾಮಪ್ಪ ಪೂಜಾರಿಯವರ ಹೊಟೇಲ್‌ನಲ್ಲೇಕುಳಿತು, ಅವರ ರಿಯಾಯಿತಿ ಊಟವನ್ನೇ ಉಣ್ಣುತ್ತಾ ಅವರ ವಿರುದ್ಧ ಜೋಕುಗಳನ್ನು ಹೇಳತೊಡಗಿದರು. ಆದರೆ ಇದಕ್ಕೆ ರಾಮಪ್ಪಪೂಜಾರಿ ಮಾತ್ರ ಕಿವುಡಾಗಿದ್ದರು. ಪತ್ರಿಕೆಯೊಂದು ಅವರ ಕುರಿತ ಜೋಕುಗಳನ್ನು ಪ್ರತಿ ವಾರ ತನ್ನ ಪತ್ರಿಕೆಯಲ್ಲಿ ಛಾಪಿಸತೊಡಗಿತ್ತು. ಆದರೆ ರಾಮಪ್ಪ ಆ ಕಡೆ ತಲೆಯೆತ್ತಿಯೂ ನೋಡಿಲ್ಲ. ಈ ದಾಳಿ ಅದೆಷ್ಟು ತೀವ್ರವಾಗಿತ್ತೆಂದರೆ, ಅವರ ಪತ್ನಿಯ ಮೇಲೂ ಜೋಕುಗಳುಹರಿದಾಡ ತೊಡಗಿದವು. ಆದರೂ ಈ ಕುರಿತು ಆಕ್ರೋಶದ ಮಾತನ್ನು ಆಡಿದವರಲ್ಲ ರಾಮಪ್ಪ ಪೂಜಾರಿ. ‘ಅಕ್ಲೆನ್ ದೇವೆರ್ ತೂಪೆರ್(ಅವರನ್ನು ದೇವರು ನೋಡಿಕೊಳ್ಳುತ್ತಾರೆ)’ ಎಂದಷ್ಟೇ ಪ್ರತಿಕ್ರಿಯಿಸುತ್ತಿದ್ದರು.
ಇಂದು ಬಿಲ್ಲವ ನಾಯಕ, ರಾಷ್ಟ್ರಮಟ್ಟದ ರಾಜಕಾರಣಿ ಎಂದು ಗುರುತಿಸಿಕೊಳ್ಳುವ ಮಾಜಿ ಸಚಿವ ಜನಾರ್ದನ ಪೂಜಾರಿ ಈ ಮಟ್ಟಕ್ಕೆಏರಿದ್ದರೆ ಅದರ ಹಿಂದೆ ರಾಮಪ್ಪ ಪೂಜಾರಿಯವರಿದ್ದಾರೆ. ಜನಾರ್ದನ ಪೂಜಾರಿಯವರ ಆರಂಭದ ರಾಜಕೀಯ ನಡೆಗಳಲ್ಲಿ ಜೊತೆನೀಡಿದವರು ರಾಮಪ್ಪ ಪೂಜಾರಿ. ಮುಂದೆ ಜನಾರ್ದನ ಪೂಜಾರಿ ಕೇಂದ್ರದಲ್ಲಿ ಸಚಿವರಾದರು. ಅನಕ್ಷರಸ್ಥ ಶೂದ್ರ ರಾಮಪ್ಪ ಪೂಜಾರಿಈ ಮೂಲಕ ತನ್ನ ರಾಜಕೀಯ ವರ್ಚಸ್ಸನ್ನು ದಿಲ್ಲಿಯವರೆಗೂ ಬೆಳೆಸಿದರು. ತಮಾಷೆಯೆಂದರೆ, ಜನಾರ್ದನ ಪೂಜಾರಿರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಬೆಳೆದು ನಿಂತಾಗ, ಮೇಲ್ವರ್ಗದ ಜನ ರಾಮಪ್ಪ ಪೂಜಾರಿಯ ಜೊತೆಗೆ ಜನಾರ್ದನ ಪೂಜಾರಿಯಹೆಸರನ್ನು ಜೋಕಿನಲ್ಲಿ ಸೇರಿಸಿ ತಮಾಷೆ ಮಾಡತೊಡಗಿದರು. ಕರಾವಳಿಯ ರಾಂಪನ ಹೆಚ್ಚಿನ ಜೋಕುಗಳಲ್ಲಿ ಆತ್ಮೀಯ ಗೆಳೆಯಜನಾರ್ದನ ಪೂಜಾರಿಯವರೂ ಬರುತ್ತಾರೆ. ವೀರಪ್ಪ ಮೊಯ್ಲಿ, ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಮಪ್ಪಪೂಜಾರಿಯವರಿಗೆ ಹತ್ತಿರವಾಗಿದ್ದರು. ಬಂಗಾರಪ್ಪ ಹತ್ತಿರವಾದಾಗ ಜನಾರ್ದನ ಪೂಜಾರಿ ದೂರವಾದರು. ಆದರೂ ಹೆಚ್ಚಿನರಾಜಕೀಯ ನಾಯಕರು ರಾಮಪ್ಪ ಪೂಜಾರಿಯ ಆರ್ಥಿಕ ಬೆಂಬಲದೊಂದಿಗೇ ಮೇಲೆ ಬಂದಿದ್ದರು.
ಕರಾವಳಿಯಲ್ಲಿ ‘ಮುಂಗಾರು’ ಪತ್ರಿಕೆ ಹುಟ್ಟಿಕೊಂಡಾಗ ಅದರ ಬೆನ್ನಿಗೆ ಬಲವಾಗಿ ನಿಂತವರು ರಾಮಪ್ಪಣ್ಣ. ಉದ್ಯಮಿಗಳನ್ನೂ, ರಾಜಕಾರಣಿಗಳನ್ನೂ ಸದಾ ದೂರವಿಡುತ್ತಲೇ ಬಂದಿದ್ದ ವಡ್ಡರ್ಸೆ ರಾಮಪ್ಪಣ್ಣರಿಗೆ ಮಾತ್ರ ಹತ್ತಿರದ ವ್ಯಕ್ತಿಯಾಗಿದ್ದರು. ಇದೇರಾಮಪ್ಪಣ್ಣರ ಮನೆಯಲ್ಲಿ ನಡೆದ ಭೂತದ ಕೋಲದ ಸುದ್ದಿಯೊಂದು ಮುಂಗಾರು ಪತ್ರಿಕೆಯ ಸಂಪಾದಕೀಯ ಬಳಗದೊಳಗೆಬಿರುಕು ತಂದಿತು ಎನ್ನುವುದನ್ನು ಪತ್ರಕರ್ತರೊಬ್ಬರು ನೆನಪಿಸಿಕೊಳ್ಳುತ್ತಾರೆ.
ಇಂತಹ ರಾಮಪ್ಪ ಪೂಜಾರಿಯವರಿಗೆ ಒಬ್ಬ ಪುಟ್ಟ ಹೆಣ್ಣು ಮಗಳಿದ್ದಳು. 5ನೆ ವರ್ಷಕ್ಕೆ ಆ ಮಗು ಕಾಯಿಲೆಯಿಂದ ತೀರಿ ಹೋಯಿತು. ಮುಂದೆ ಮಕ್ಕಳಿಲ್ಲದೆ ತಮ್ಮ ನೆಂಟರಿಷ್ಟರನ್ನು, ಅನಾಥರನ್ನು ಮಕ್ಕಳೆಂದು ತಿಳಿದು ಸಾಕಿದರು. ಮಕ್ಕಳೇ ಇಲ್ಲದಿದ್ದರೂ ಅವರ ಮನೆಅವಿಭಕ್ತ ಕುಟುಂಬವಾಗಿತ್ತು. ಸುಮಾರು 70 ಜನರು ಆ ಕುಟುಂಬದ ಸದಸ್ಯರಾಗಿದ್ದರು. ಬಡವರನ್ನು ಹುಡುಕಿ ಅವರನ್ನು ಮನೆಗೆಕರೆದು ಊಟ ಹಾಕುತ್ತಿದ್ದರು. ಇಂತಹ ನಾಯಕನನ್ನು ಜನರು ಮರೆತು ಬಿಟ್ಟಿದ್ದಾರೆ.ಇಲ್ಲಿನ ತರುಣರೇ ರಾಂಪನ ಜೋಕುನ್ನುಹಬ್ಬಿಸಿದ್ದಾರೆ. ತಾವು ತಮ್ಮನ್ನೇ ಅಣಕಿಸುತ್ತಿದ್ದೇವೆ ಎನ್ನುವ ಸಂಗತಿ ಅವರಿಗೆ ತಿಳಿದಿಲ್ಲ. ಇಂದು ರಾಮಪ್ಪ ಪೂಜಾರಿ ನಮ್ಮ ನೆನಪಿನಿಂದಅಳಿದು ಹೋಗುತ್ತಿದ್ದಾರೆ. ಆದರೆ ರಾಂಪ ಜೀವಂತವಾಗಿದ್ದಾನೆ. ಇದಲ್ಲವೇ ದುರಂತ! ಈ ಕಾರಣಕ್ಕಾಗಿಯೇ, ‘ರಾಂಪನಜೋಕು’ಗಳನ್ನು ಕೇಳುವಾಗ ನನಗೆ ಸಿಟ್ಟು ಉಕ್ಕಿ ಬರುತ್ತದೆ. ಒಬ್ಬ , ಅನಕ್ಷರಸ್ಥ ಮಾನವೀಯ ವ್ಯಕ್ತಿಯನ್ನು ನೆನೆದು ಯಾಕೋ ಕಣ್ಣಾಲಿತುಂಬುತ್ತದೆ……….||