ಮಾಧ್ಯಮ ಕ್ಷೇತ್ರದ ಸಾಧನೆಗೆ ಮಂಗಳೂರಿನ ಭರತ್ ರಾಜ್ ಗೆ ಬೆಸ್ಟ್ ರಿಪೋರ್ಟರ್ ಪ್ರಶಸ್ತಿ
ಮಂಗಳೂರು: ಮಾಧ್ಯಮ ಕ್ಷೇತ್ರದ ಸಾಧನೆ ಪರಿಗಣಿಸಿ ಕೊಡಲಾಗುವ ದಿ ನ್ಯೂ ಇಂಡಿಯನ್ ಟೈಮ್ಸ್ ಅವಾರ್ಡ್ಸ್ ನಲ್ಲಿ (The New India Time Award) ಏಷ್ಯಾನೆಟ್ ಸುವರ್ಣ ನ್ಯೂಸ್ ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರ ಭರತ್ ರಾಜ್ ಗೆ ಉತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಒಲಿದಿದೆ.
x
ಸತತ ನಾಲ್ಕನೇ ಆವೃತ್ತಿಯ TNIT ಮೀಡಿಯಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನ (Bengaluru ) ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮಂಗಳೂರಿನ ಕುಂಪಲ ನಿವಾಸಿಯಾದ ಭರತ್ ರಾಜ್.ಕೆ.ಸನಿಲ್, ಪ್ರಸ್ತುತ ಏಷ್ಯಾನೆಟ್ ಸುವರ್ಣ ನ್ಯೂಸ್ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟು 12 ವರ್ಷ ಸಂದಿದ್ದು, ಜಯಕಿರಣ ಕನ್ನಡ ದಿನಪತ್ರಿಕೆಯಲ್ಲಿ 5 ವರ್ಷ, ಬಿಟಿವಿ ನ್ಯೂಸ್ ನಲ್ಲಿ 3 ವರ್ಷ, ಪ್ರಸ್ತುತ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ 4 ವರ್ಷದಿಂದ ವರದಿಗಾರನಾಗಿದ್ದಾರೆ. ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಂಡಿತ್ ಹೌಸ್ ನಲ್ಲಿ ಹುಟ್ಟಿದ ಭರತ್ ರಾಜ್, ಪ್ರಸ್ತುತ ಮಂಗಳೂರು ತಾಲೂಕಿನ ಕುಂಪಲ ಎಂಬಲ್ಲಿ ವಾಸ. ಎಸ್ಸೆಸ್ಸೆಲ್ಸಿವರೆಗೆ ಮಂಗಳೂರು ತಾಲೂಕಿನ ಬಬ್ಬುಕಟ್ಟೆ ಪ್ರೌಢಶಾಲೆಯಲ್ಲಿ ಶಿಕ್ಷಣ. ಆ ಬಳಿಕ ಉಳ್ಳಾಲದ ಭಾರತ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ. ಪಿಯುಸಿ ವೇಳೆ ಬೆಳಿಗ್ಗೆ ಹಾಲು ಪೇಪರ್ ಹಾಕಿಕೊಂಡು ದುಡಿಮೆ. ನಂತರ ಕುಟುಂಬದ ತೀವ್ರ ಆರ್ಥಿಕ ಸಮಸ್ಯೆಯಿಂದ ಓದು ಮುಂದುವರೆಸಲಾಗದೇ ಕೊರಿಯರ್ ಡೆಲಿವರಿ ಬಾಯ್ ಕೆಲಸಕ್ಕೆ ಸೇರ್ಪಡೆ. ಈ ವೇಳೆ ಓದಿನ ಆಸಕ್ತಿ ಇದ್ದ ಕಾರಣ ಮಂಗಳೂರಿನ ಬೆಸೆಂಟ್ ಸಂಜೆ ಕಾಲೇಜಿನಲ್ಲಿ ರಾತ್ರಿ ಕಲಿಕೆಯಲ್ಲಿ ದ್ವಿತೀಯ ಪಿಯುಸಿ ಪೂರ್ಣ. ಹಗಲಿನಲ್ಲಿ ಕೆಲಸ ಮುಂದುವರೆಸಿಕೊಂಡೇ ಪಿಯುಸಿ ಪೂರ್ಣ. ಸಂಜೆ ಕಾಲೇಜಿನ ಶಿಕ್ಷಣದ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಮೆ.
ಪತ್ರಿಕೋದ್ಯಮಕ್ಕೆ ಪ್ರವೇಶ:
ಹಗಲು ಕೆಲಸ, ಸಂಜೆ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದಾಗಲೇ ಪತ್ರಿಕೋದ್ಯಮದ ಕಡೆಗೆ ಸೆಳೆತ. ಸಂಜೆ ಕಾಲೇಜಿನಲ್ಲಿ ಪಿಯುಸಿ ಮುಗಿದ ಬೆನ್ನಲ್ಲೇ ಮಂಗಳೂರಿನ ಜಯಕಿರಣ ದಿನಪತ್ರಿಕೆಯಲ್ಲಿ ರಾತ್ರಿ ಉಪಸಂಪಾದಕನಾಗಿ ಕೆಲಸಕ್ಕೆ ಸೇರ್ಪಡೆ. 18ನೇ ವಯಸ್ಸಿನಲ್ಲೇ ಜಯಕಿರಣ ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ ಆರಂಭ. ಎರಡು ವರ್ಷ ಉಪಸಂಪಾದಕನಾಗಿದ್ದವನಿಗೆ ವರದಿಗಾರನಾಗಿ ಭಡ್ತಿ. ಆ ಬಳಿಕ ಅದೇ ಪತ್ರಿಕೆಯಲ್ಲಿ ಮೂರು ವರ್ಷಗಳ ಕಾಲ ಮಂಗಳೂರು ನಗರ ವರದಿಗಾರನಾಗಿ ಕೆಲಸ. ಸುಮಾರು ಐದು ವರ್ಷಗಳ ಕಾಲ ಜಯಕಿರಣ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ. ಈ ಹೊತ್ತಲ್ಲೇ 2014ರಲ್ಲಿ ಆರಂಭವಾದ ಕನ್ನಡ ನ್ಯೂಸ್ ಚಾನೆಲ್ ಬಿಟಿವಿ ನ್ಯೂಸ್ ಗೆ ದ.ಕ ಜಿಲ್ಲಾ ವರದಿಗಾರನಾಗಿ ಆಯ್ಕೆ. ಬಿಟಿವಿ ಜಿಲ್ಲಾ ವರದಿಗಾರನಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ. ಆ ಬಳಿಕ 2017ರಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸೇರ್ಪಡೆ. ಪ್ರಸ್ತುತ ನಾಲ್ಕು ವರ್ಷಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ದ.ಕ ಜಿಲ್ಲಾ ವರದಿಗಾರರಾಗಿ ಕಾರ್ಯ. 18 ವರ್ಷ ವಯಸ್ಸಿನಲ್ಲಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿ ನಿರಂತರ 12 ವರ್ಷಗಳಿಂದ ಉಪಸಂಪಾದಕ ಕೆಲಸ ಹಾಗೂ ಹಲವು ವರ್ಷಗಳ ಕಾಲ ದ.ಕ ಜಿಲ್ಲೆಯ ಜಿಲ್ಲಾ ವರದಿಗಾರನಾಗಿ ಕಾರ್ಯ. ಬಿಟಿವಿ ನ್ಯೂಸ್ ಅವಧಿಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಮೊಟ್ಟ ಮೊದಲ ಮುಖಾಮುಖಿ ಟಿವಿ ಸಂದರ್ಶನ ನಡೆಸಿದ್ದು, ಈ ವೇಳೆ ಬಿಟಿವಿ ನ್ಯೂಸ್ ನಿರೂಪಕ ಕೆಲಸಕ್ಕೆ ಅವಕಾಶ. ಹೀಗಾಗಿ ಬೆಂಗಳೂರಿನ ಬಿಟಿವಿ ಕಚೇರಿಯಲ್ಲಿ ಕೆಲ ಕಾಲ ನಿರೂಪಕ ತರಬೇತಿ ಪಡೆದಿದ್ದು, ಕಾರಣಾಂತರಗಳಿಂದ ಸುವರ್ಣ ನ್ಯೂಸ್ ದ.ಕ ಜಿಲ್ಲಾ ವರದಿಗಾರನಾಗಿ ಅವಕಾಶ ಸಿಕ್ಕ ಹಿನ್ನೆಲೆ ಮತ್ತೆ ಮಂಗಳೂರಿನಲ್ಲೇ ಕಾರ್ಯ. ವರದಿಗಾರನಾಗಿದ್ದುಕೊಂಡೇ ಕಲ್ಲಡ್ಕ ಪ್ರಭಾಕರ ಭಟ್, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಮೋಹನ್ ಆಳ್ವಾ ಸೇರಿದಂತೆ ಕರಾವಳಿಯ ಹಲವು ಪ್ರಮುಖರ ಮುಖಾಮುಖಿ ಸಂದರ್ಶನ ನಡೆಸಿದ ಹೆಗ್ಗಳಿಕೆ.
ಸದ್ಯ ಟಿಐಎನ್ ಟಿ ಅವಾರ್ಡ್ಸ್‌ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ.2017ರಿಂದ ಆರಂಭವಾದ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ ಸತತ 3 ವರ್ಷ ಯಶಸ್ವಿಯಾಗಿ ನಡೆದಿತ್ತು. 2019-20 ನೇ ಸಾಲಿನ ಪ್ರಶಸ್ತಿ ಪ್ರಧಾನಕ್ಕೆ ಕೊರೋನಾ ಅಡ್ಡಿಯಾಗಿತ್ತು. ಅನಿವಾರ್ಯವಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಇದೀಗ ಒಂದು ವರ್ಷದ ಅವಾರ್ಡ್ಸ್ ಬ್ರೇಕ್ ನ ಬಳಿಕ 2020-21 ನೇ ಸಾಲಿನ ಕಾರ್ಯಕ್ರಮವನ್ನು ಅರ್ಥಾತ್ 4 ನೇ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಲಾಗಿದೆ. ಮಾಧ್ಯಮ ಕ್ಷೇತ್ರದ ಸಾಧಕರನ್ನು ಗೌರವಿಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ ನಲ್ಲಿ ಟಿವಿ ನಿರೂಪಕರು, ವರದಿಗಾರರು, ವಿಡಿಯೋ ಎಡಿಟರ್ ಗಳು, ವಾಯ್ಸ್ ಓವರ್ ಆರ್ಟಿಸ್ಟ್, ಕ್ಯಾಮರಾಮನ್ ಗಳು ಸೇರಿದಂತೆ ವಿವಿಧ ಕೆಟಗರಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಜೊತೆಗೆ ಕೆಲವು ವಿಶೇಷ ಅವಾರ್ಡ್ಸ್ ಸಹ ನೀಡಲಾಗುತ್ತದೆ. ಎಲ್ಲಾ ವಿಭಾಗದಲ್ಲಿಯೂ ಪುರುಷ ಮತ್ತು ಮಹಿಳಾ ಸಾಧಕರನ್ನು ಗೌರವಿಸಲಾಗುತ್ತಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಚಿತ್ರ ನಟರಾದ ರಾಘವೇಂದ್ರ ರಾಜ್ ಕುಮಾರ್, ನೆನಪಿರಲಿ ಪ್ರೇಮ್, ವಷಿಷ್ಠ ಸಿಂಹ, ಮೇಘನಾ ಗಾಂವ್ಕರ್, ನಿಖಿಲ್ ಕುಮಾರಸ್ವಾಮಿ, ದೊಡ್ಡಣ್ಣ, ಗಾಯಕಿ ಶಮಿತಾ ಮಲ್ನಾಡ್, ಸಾಹಿತಿ ದೊಡ್ಡರಂಗೇಗೌಡರು, ಸಿದ್ದಗಂಗಾ ಮಠದ ಶ್ರೀಗಳು ಸೇರಿ ಹಲವು ಗಣ್ಯರು ಹಾಜರಿದ್ದರು. ಇತರೆ ವಾಹಿನಿಗಳ ಹಲವಾರು ಮಂದಿ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರು.