ಯಾವುದೇ ಕಲೆಯ ಬಗ್ಗೆ ಆಸಕ್ತಿಯಿದ್ದಾಗ ಅದನ್ನು ತಿಳಿಯಬೇಕು, ನಾನೂ ಹಾಗೆ ಆಗಬೇಕು, ಎನ್ನುವುದು ಮಾನವ ಸಹಜ ಗುಣ. ಆದರೆ ನಾನೂ ಅದರಲ್ಲಿ ತೊಡಗಬೇಕೆಂದರೆ ಅನುಭವದ ಪ್ರಶ್ನೆ ಕಾಡದಿರದು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಹಿಂದೇಟು ಹಾಕುವುದನ್ನು ಪ್ರತಿ ರಂಗದಲ್ಲೂ ಕಾಣಸಿಗುತ್ತದೆ. ಕಿರುತೆರೆ, ಸಿನಿಮಾ ರಂಗದಲ್ಲಿ ರಂಗಭೂಮಿ, ನಟನೆ, ಮಾಡೆಲಿಂಗ್ ಕ್ಷೇತ್ರದ ಪರಿಚಯವಿದೆಯೇ ಎಂಬ ಪ್ರಶ್ನೆ ಮಾಮೂಲು.
ಅಂತೆಯೇ ಮನದ ಮೂಲೆಯಲ್ಲಿದ್ದ ನಟಿಯಾಗಬೇಕೆಂಬ ಸಣ್ಣ ಕನಸು ಕೋಸ್ಟಲ್ ವುಡ್ನ ‘ಎನ್ನ’ ಎಂಬ ತುಳು ಚಿತ್ರದ ನಾಯಕಿಯಾಗಿ ಆಯ್ಕೆಯಾಗುವುದರೊಂದಿಗೆ ನನಸಾಗಿ ಜನರಿಂದ ಪ್ರಶಂಸೆಗೆ ಪಾತ್ರರಾದವರೇ ಶ್ರುತಿ ಆರ್. ಪೂಜಾರಿ.
ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಅವರಾಲು ಮಟ್ಟು ಎಂಬ ಸಣ್ಣ ಗ್ರಾಮದ ರಮೇಶ್ ಪೂಜಾರಿ ಮತ್ತು ರೇವತಿ ಪೂಜಾರಿ ದಂಪತಿಗಳ ಪುತ್ರಿಯಾದ ಶ್ರುತಿಯವರು ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಪದವಿ ಶಿಕ್ಷಣವನ್ನು ಮುಲ್ಕಿಯ ವಿಜಯ ಕಾಲೇಜಿನಲ್ಲಿ ಮುಗಿಸಿದರು. ತದನಂತರ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಬಿಡುವಿನ ವೇಳೆಯಲ್ಲಿ ತನ್ನದೇ ಫೋಟೋ ಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆ ಮೂಲಕ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ತನ್ನ ಹೊಸ ತುಳು ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಹಂಬಲದಲ್ಲಿದ್ದ ನಿರ್ದೇಶಕ ವಿಶ್ವನಾಥ ಕೋಡಿಕಲ್ ರ ‘ಎನ್ನ’ ಚಿತ್ರದ ಅಡಿಷನ್ ನಡೆಯುತ್ತಿತ್ತು. ಅದರಲ್ಲಿ ಶ್ರುತಿಯವರು ಭಾಗವಹಿಸಿ ಕೊಟ್ಟ ಸಂಭಾಷಣೆಯನ್ನು ನಟನೆಯೊಂದಿಗೆ ಒಪ್ಪಿಸಿ ಚಿತ್ರದ ನಾಯಕಿಯಾಗಿ ಆಯ್ಕೆಯಾಗುತ್ತಾರೆ. ಅಲ್ಲಿ ಒಂದಷ್ಟು ಧೈರ್ಯ ಬಂದರೂ ನಟನೆ, ಸಂಭಾಷಣೆ, ಕ್ಯಾಮರ ಇದರ ಬಗೆಗೆ ಸರಿಯಾದ ಅನುಭವ ಇರದೆ ಭಯವಿತ್ತು. ಮುಂದೆ ಚಿತ್ರದ ಪೂರ್ವ ತಯಾರಿಯ ಹಂತದಲ್ಲಿ ಸಾಕಷ್ಟು ತರಬೇತಿ ಪಡೆದೆ ಜೊತೆಗೆ ಹೆಚ್ಚಿನವರು ಹೊಸಬರೇ ಆಗಿದ್ದರಿಂದ ಯಾವುದೇ ರೀತಿಯ ತೊಂದರೆಯಾಗದೆ ಉತ್ತಮವಾಗಿ ಅಭಿನಯಿಸಿದೆ ಎನ್ನುತ್ತಾರೆ.
ಹಿಂಜರಿಕೆಯಿಂದ ನಾನು ಹಿಂದೆ ಸರಿದಿದ್ದರೆ ಬಹುಷ: ನಟಿಯಾಗಬೇಕೆಂಬ ಆಸೆ ಆಸೆಯಾಗಿಯೇ ಉಳಿದಿತ್ತೇನೋ ಎನ್ನುವ ಅವರು ತನ್ನ ಬದುಕಿನಲ್ಲಿ ಬಂದ ಒಂದೊಳ್ಳೆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ ಎನ್ನುವ ತೃಪ್ತಿ ನನಗಿದೆ. ಮುಂದೆ ಉತ್ತಮ ಅವಕಾಶದ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ. ಇನ್ನಷ್ಟು ಅವಕಾಶಗಳು ಇವರಿಗೆ ಲಭಿಸಲಿ ಎಂದು ಹಾರೈಸುವ.