TOP STORIES:

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ ಅಲ್ಲ ಎಂಬರ್ಥದಲ್ಲೇ ಪರಿಗಣಿತವಾಗಿತ್ತು. ಒಂದೇ ಆ ವ್ಯಕ್ತಿಯಲ್ಲಿ ಅಥವಾ ಗೈದ ವಿಧಿವಿಧಾನಗಳಲ್ಲಿ ಏನಾದರೂ ಲೋಪದೋಷಗಳಾದಾಗ ಮಾತ್ರ ಹೀಗಾಗುವುದಿತ್ತು.‌ ಹೆಚ್ಚಿನ ಸಂದರ್ಭಗಳಲ್ಲಿ ಆ ವ್ಯಕ್ತಿಯ ಭಾವೋದ್ವೇಗವೇ‌ ಇದಕ್ಕೆ ಕಾರಣ.‌ ಆದರೆ, ಮೂರು ನಾಲ್ಕು ವರ್ಷಗಳಲ್ಲಿ ಊರಿನ ಐದಾರು ಕಡೆಯ ಊದುವಿನ ಸಂದರ್ಭದಲ್ಲಿ ಹುಲಿಯಾವೇಶ. ಕೆಲವೆಡೆ ಒಂದೇ ಊದುವಿನಲ್ಲಿ ಐದಾರು ಮಂದಿಗೆ ಏಕಕಾಲಕ್ಕೆ ಆವೇಶ. ಅದನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಟ್ಟರೆ ಲೈಕೋ ಲೈಕು, ಶೇರೋ ಶೇರು, ಮೆಚ್ಚುಗೆಯ ಕಮೆಂಟೋ ಕಮೆಂಟು… ಸ್ಟೇಟಸಿಗ್ಗೇರಿಸಿ ಈ ಬಾರಿಯ ಸಾರ್ಥಕ್ಯ ಎಂಬಂತೆ ಬಿಂಬಿಸುವವರಿದ್ದಾರೆ. ಕೆಲವರಂತೂ ‘ಓಂ ಶ್ರೀ ವ್ಯಾಘ್ರವೇ ನಮಃ…..!!!! ಓಂ ಶ್ರೀ ದುರ್ಗೆಯೇ ನಮಃ’…!!!! ಜೈ ವ್ಯಾಘ್ರ ವಾಹಿನಿ….!!!

ಹುಲಿ ಆವೇಶಗೊಳ್ಳುವವನು ‘ಬೆಸ್ಟ್ ಟೈಗರ್ ಆರ್ಟಿಸ್ಟ್’ ಎಂಬ ಹೆಗ್ಗಳಿಕೆಯ ಹವಣಿಕೆಯಲ್ಲಿರುವಂತೆ ತೋರುತ್ತದೆ. ಹುಲಿ ಆವೇಶ ಆಗುವುದು ಊದು ಕಾರ್ಯಕ್ರಮದ ಸ್ಪೆಷಲ್ ಆಕರ್ಷಣೆ ಎಂಬಂತಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಹೀಗಾಗಲು ಆ ವ್ಯಕ್ತಿಯೊಡನೆ ಆಯೋಜಿತ ತಂಡವು ಒಳಒಪ್ಪಂದವೇನಾದರೂ ಮಾಡಿಕೊಂಡಿರುವಂತೆಯೂ ಕಂಡದ್ದಿದೆ.

 

ಅಷ್ಟಕ್ಕೂ ಈ ಆವೇಶಧಾರಿಗಳ ಮೈಯಲ್ಲಿ ಬರುವುದಾದರೂ ಏನು? ‘ಹುಲಿ’ ಎಂಬ ಒಕ್ಕೊರಲ ಉತ್ತರ ಕೊಡುವುದಾದರೆ ಆ ಹುಲಿ ಯಾವುದು?‌ಏಕೆ ಕರೆಯದೆ ಬರುತ್ತದೆ? ಅದರ ಅಪೇಕ್ಷೆ ಏನು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು. ವೇಷದ ಹುಲಿಯನ್ನು ಒಂದು ‘ದೈವಿಕ ಶಕ್ತಿ’, ದುರ್ಗೆಯ ವಾಹನ ಎಂಬ ಅರ್ಥದಲ್ಲಿ ಪರಿಗಣಿಸಿದರೂ ಅದರ ವೇಷವನ್ನಷ್ಟೇ ತೊಡಬಹುದಲ್ಲದೆ ಶಕ್ತಿಧಾರಣೆ ತೀರಾ ಅಪ್ರಸ್ತುತ. ವರ್ಷಕೊಮ್ಮೆ ವೇಷ ತೊಡುವವನ ಮೇಲೆ ಹಾಗೆಲ್ಲ ಒಂದು ಉಗ್ರಶಕ್ತಿ ಆವೇಶಗೊಳ್ಳುತ್ತದೆಯೇ? ಹಳೆಯ ದಿನಗಳಂತೆ ಒಂದು ಶಿಸ್ತುಬದ್ಧ ವ್ರತಾಚರಣೆಯ ಉಪಾದಿಯಲ್ಲಿ ಕಟ್ಟುನಿಟ್ಟಿನ ಶುದ್ಧಾಚಾರ ಪಾಲಿಸಿ ಹುಲಿವೇಷ ಧರಿಸುವ ಕ್ರಮ ಈಗ ಇಲ್ಲ. ಹೀಗಿರುವಾಗ ಆವೇಶಕ್ಕೆ ಮಾನದಂಡವೇನಾದರೂ ಬೇಕಲ್ಲವೇ?

ವೇಷಧಾರಣೆಯ ಸಂದರ್ಭದಲ್ಲಿ ಆವೇಶಗೊಳ್ಳುವುದು ಎಲ್ಲೋ ದೈವಾರಾಧನೆಯ ಅರದಲ ಸಂದರ್ಭದ ವಸಯವನ್ನು ನೆನಪಿಸುವಂತಿದೆ. ಅಲ್ಲಿರುವ

ಎಲ್ಲರ ನಡುವೆ ತನ್ನತ್ತ ನೆರೆದವರ ವಿಶೇಷ ಚಿತ್ತ ಸೆಳೆಯುವ ತಂತ್ರವಾಗಿಯೂ ಬಳಕೆಯಾಗುವ ಸಾಧ್ಯತೆಯಿದೆ. ಬಹುಜನ ನಿರೀಕ್ಷೆಗಳಿರುವ ಆಯಾ ಸಮೂಹ ಅಥವಾ ಸಂದರ್ಭಗಳ ಪ್ರೇರಣೆಯೂ ಆಗಿರಬಹುದು.

ಊದು ಮುಹೂರ್ತದಲ್ಲಿ ನೆರೆದವರ ಮನೋರಂಜನೆಗಾಗಿ ವಿಶೇಷ ಆಹ್ವಾನಿತರಾಗಿ ಎಲ್ಲರೊಂದಿಗೆ ಊದು (ಧೂಪ) ಹಾಕಿ ಬೆಸ್ಟ್ ಪರ್ಫೋಮೆನ್ಸ್ ಕೊಟ್ಟು ಒಂದು ಕಡೆಯ ಪೇಮೆಂಟ್ ಪಡೆದುಕೊಂಡು ತಕ್ಷಣ ಇನ್ನೊಂದು ಕಡೆಯ ಊದಿನ ಕುಣಿತಕ್ಕೆ ನಿಲ್ಲುವ ರೆಡಿಮೆಡ್ ಡ್ಯಾನ್ಸರ್ಸ್‌ಗಳಂತೆ ಈ ಆವೇಶಧಾರಿಗಳನ್ನೂ ಪ್ರತಿ ಊದು ಕಾರ್ಯಕ್ರಮದ ಗಾಂಭೀರ್ಯ, ನೈಜತೆ, ಉಗ್ರತೆ ಹೆಚ್ಚಿಸುವ ಸಲುವಾಗಿ ಹಣಕೊಟ್ಟು ಅಲ್ಲಲ್ಲಿಗೆ ಕರೆಸುವ ಪರಿಪಾಟಲು ಪ್ರಾರಂಭವಾಗಬಹುದು.

ಇರುವುದನ್ನೇ ಚೆಂದಕ್ಕೆ ಮುಂದುವರಿಸಿಕೊಂಡು ಹೋದರೆ ಸಾಲದೇ? ಮನೋರಂಜನಾ ಪ್ರಧಾನ ಕಲೆಯನ್ನು ಏಕೆ ಹೆಚ್ಚೆಚ್ಚು ಧಾರ್ಮಿಕಗೊಳಿಸಬೇಕು ? ಯಕ್ಷಗಾನದ ಚೌಕಿಯಂತೆ ಊದುಮಂಟಪದಲ್ಲೂ ಕಾಣಿಕೆಡಬ್ಬಿ ಇಟ್ಟು ಪೂಜೆ, ಬಗೆಬಗೆಯ ಆರತಿಗಳು, ತೀರ್ಥ ವಿತರಣೆ, ಪ್ರಸಾದ ವಿನಿಯೋಗಗಳು ಪ್ರಾರಂಭವಾಗುವ ದಿನಗಳು ದೂರವಿಲ್ಲ. ದೈವಕಟ್ಟುವವರೇ ತೊಡುವ ಬಹುಪಾಲು ದೈವಾಲಂಕಾರದ ಪರಿಕರಗಳಿರುವ ಆಟಿ ಕಳೆಂಜ, ಸೋಣದ ಜೋಗಿಗಳೇ ಆವೇಶಗೊಂಡ ಉದಾಹರಣೆಗಳಿಲ್ಲ. ಏಕೆಂದರೆ ಅವು ಆವೇಶದ ಶಕ್ತಿಗಳಲ್ಲ. ಹಾಗಿರುವಾಗ ಈ ಹುಲಿ?

 

ವೇಷಧಾರಣೆಯ ಪೂರ್ವದಲ್ಲಿ ಸಂದರ್ಭಪ್ರೇರಿತ ಆಕರ್ಷಣೆ ಅಥವಾ ಆವೇಶಕ್ಕೆ ಒಳಗಾಗುವುದು ಸಹಜತೆ ಅಲ್ಲ. ನೈಜತೆಯೆಂದೂ ತಿಳಿದುಕೊಳ್ಳಬಾರದು. ಅದೊಂದು ಒಂದು ಬಗೆಯ ನ್ಯೂನತೆ ಎನ್ನುವುದೇ ಸರಿ. ಹಿರಿಯರು ಹೇಳುವಂತೆ, ಅದು ತಪ್ಪುಕಾಣಿಕೆ ಹಾಕುವಷ್ಟು ಪ್ರಮಾದ. ಒಪ್ಪತಕ್ಕದ್ದಲ್ಲದ ವಿದ್ಯಮಾನ. ಇಂತಹ ವ್ಯಕ್ತಿದೋಷ, ಕಾರ್ಯಕ್ರಮದ ವಿಧಿದೋಷಗಳನ್ನು ಕಡಿಮೆ ಮಾಡುವುದೇ ಉದ್ದೇಶವಾಗಬೇಕೇ ಹೊರತು, ಆವೇಶಧಾರಿಗಳ ಸಂಖ್ಯೆ ಹೆಚ್ಚಿಸುವುದಲ್ಲ. ಈಗಾಗಲೇ ಇಂತಹ ವೀಡಿಯೊಗಳನ್ನು ನೋಡಿ ಅನ್ಯರು ಬಿದ್ದೆದ್ದು ನಕ್ಕದ್ದಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ಆವೇಶಗೊಂಡವನು ಮುಂದುವರಿದು ದೈವದಂತೆ ಕೈಯಲ್ಲಿ ಜಂಡೆ, ಧೂಪದ ತಟ್ಟೆ, ಹುಲಿಮಂಡೆ, ಹೂವುಗಳನ್ನು ಹಿಡಿದುಕೊಂಡು ವಿವಿಧ ಬಗೆಯ ಕುಣಿತ, ಅಭಿನಯ ಮಾಡುವ ಹೊಸತನವನ್ನೂ ತೋರಿಸಿಯಾನು.

 

ಅಂಗಣಬಿಟ್ಟ ಬಿಟ್ಟ ದೈವಾರಾಧನೆಯು ಈಗಾಗಲೇ ಬೀದಿಬೀದಿಗಳಲ್ಲಿ ಪ್ರದರ್ಶನದ ಸರಕುಗಳಾಗಿ ನವಶಿಕ್ಷಿತರ ಅವಿಶ್ವಾಸಕ್ಕೆ ಕಾರಣವಾಗುತ್ತಿದೆ. ಅವನ್ನು ಇರುವೆಡೆಯಲ್ಲೇ ಇರುವ ಹಾಗೆ ಕಟ್ಟಿಡುವ ನಿಷ್ಠೆ ನಮಗಿಲ್ಲ. ನಾವು ದಿನೇದಿನೇ ಹೊಸದೊಂದು ಟ್ರೆಂಡನ್ನು ಪರಿಚಯಿಸುವ ಹವಣಿಕೆಯಲ್ಲಿದ್ದೇವೆ. ಇನ್ನು ಊದುಮಂಟಪದಲ್ಲೂ ಆವೇಶಗಳೇ ತುಂಬಿಹೋದರೆ ಈಗಿನ ಮಕ್ಕಳೆಲ್ಲರೂ ದೈವ ಮತ್ತು ವೇಷಗಳೆರಡೂ ಒಂದೇ ಎಂದಂದುಕೊಳ್ಳುತ್ತಾರೆ ಅಷ್ಟೆ. ಈ ವಿದ್ಯಮಾನವನ್ನು ಅವರು ಕಾಪುವಿನ ಐತಿಹಾಸಿಕ ಪಿಲಿಕೋಲಕ್ಕೋ, ಕೇರಳದ ಪಿಲಿಭೂತಕ್ಕೋ ಹೋಲಿಸಿ ನೋಡುವಂತಾದರೂ ಆಶ್ಚರ್ಯವಿಲ್ಲ. ಅನುಭವಿಗಳಿಗಾದರೆ ಏನೋ ಅನ್ನಬಹುದು… ಆದರೆ ವರ್ಷವಿಡೀ ಬೇಕಾಬಿಟ್ಟಿಯಾಗಿ ಊರುತಿರುಗಿಕೊಂಡಿರುವ ಆಸಾಮಿಗೂ, ಮಕ್ಕಳಿಗೂ, ಮೊದಲ ಬಾರಿ ವೇಷ ಹಾಕುವವನಿಗೂ ಆವೇಶವಾಗುವುದು ಕೆಲವೊಮ್ಮೆ ನಗು ತರಿಸುತ್ತದೆ.‌

ಅಷ್ಟು ದುರ್ಬಲ ಮನಸ್ಸಿನವರು ಉಗ್ರಕಲ್ಪನೆಯ ಹುಲಿಯಂತಹ ವೇಷ ತೊಡಲು ಸೂಕ್ತರಲ್ಲ ಬಿಡಿ.

ಪಿಲಿಯಾವೇಶ ಒಂದು ವಿಲಕ್ಷಣ ಬೆಳವಣಿಗೆಯೇ ಹೊರತು ವೇಷದ ಶುಭಪ್ರದ ಸಂಪ್ರದಾಯವಲ್ಲ.

ಬರೆಹ – ಡಾ ಅರುಣ್ ಉಳ್ಳಾಲ್


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »