ಮಂಗಳೂರು: ಗರೋಡಿ ಸ್ಟೀಲ್ ಸಂಸ್ಥೆಯಿಂದ ಜೆಎಸ್‌ಡಬ್ಲ್ಯೂ ಸಹಕಾರದೊಂದಿಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಗೆ ಆರಂಭಿಸಲಾದ ಉಚಿತ ಅಂಬುಲೆನ್ಸ್ ಸೇವೆಗೆ ಸೋಮವಾರ ಬೈಕಂಪಾಡಿ ಗರೋಡಿ ಸ್ಟೀಲ್ ಪ್ರಾಂಗಣದಲ್ಲಿ ಚಾಲನೆ ನೀಡಲಾಯಿತು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಂಬುಲೆನ್ಸ್ ಸೇವೆ ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಂಕಷ್ಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿಗಳು ನಾನಾ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಇದೀಗ ಗರೋಡಿ ಸ್ಟೀಲ್ ಸಂಸ್ಥೆಯ ಸಂಸ್ಥಾಪಕರಾದ ಮನೋಜ್ ಸರಿಪಲ್ಲ ಅವರು ಮೂಡುಬಿದಿರೆ ಕ್ಷೇತ್ರಕ್ಕೆ ಉಚಿತ ಅಂಬುಲೆನ್ಸ್ ಸೇವೆ ನೀಡಿರುವುದು ಶ್ಲಾಘನೀಯ ಮತ್ತು ಅವರ ಸಮಾಜಮುಖಿ ಕಾರ್ಯವನ್ನು ವ್ಯಕ್ತಪಡಿಸುತ್ತದೆ.
ಈ ಕಾರ್ಯಕ್ಕೆ ಮೂಡುಬಿದಿರೆ ಜನತೆಯ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಇನ್ನಷ್ಟು ಸಾಮಾಜಿಕ ಕಾರ್ಯಗಳು ಈ ಸಂಸ್ಥೆಯ ಮುಖೇನ ನಡೆಯಲಿ ಎಂದು ಶುಭ ಹಾರೈಸಿದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮಾತನಾಡಿ, ಸಾಮಾಜಿಕ ಸೇವಾ ಮನೋಭಾವದಿಂದ ಉದ್ಯಮಿಗಳು ಸರಕಾರದ ಜತೆ ಕೈ ಜೋಡಿಸಿದಾಗ ಜನರಿಗೆ ಉತ್ತಮ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ. ಕೊರೊನಾ ವಿರುದ್ದದ ಹೋರಾಟದಲ್ಲಿ ಜೀವದ ರಕ್ಷಣೆಗೆ ಪ್ರಥಮ ಆಧ್ಯತೆಯಾಗಿದೆ.ಈ ನಿಟ್ಟಿನಲ್ಲಿ ಮನೋಜ್ ಅವರ ಕೊಡುವೆ ಅಭಿನಂದನೀಯ ಎಂದರು.
ಗರೋಡಿ ಸ್ಟೀಲ್ ಸಂಸ್ಥೆಯ ಸಂಸ್ಥಾಪಕ ಮನೋಜ್ ಸರಿಪಲ್ಲ ಮಾತನಾಡಿ, ಅಂಬುಲೆನ್ಸ್ ಸಂಪೂರ್ಣ ಉಚಿತ ಸೇವೆ ನೀಡಲಿದ್ದು, ಹವಾನಿಯಂತ್ರಿತ ಸಹಿತ ಆಕ್ಸಿಜನ್, ಪ್ರಥಮ ಚಿಕಿತ್ಸೆಗೆ ಪೂರಕವಾದ ವ್ಯವಸ್ಥೆಗಳು ಇವೆ. ಇಬ್ಬರು ಸಿಬ್ಬಂದಿಗಳು ಅದಕ್ಕಾಗಿ ನೇಮಿಸಲಾಗಿದೆ. ಮೂಡುಬಿದಿರೆ ಶಾಸಕರ ಮನವಿ ಮೇರೆಗೆ ಈ ಅಂಬುಲೆನ್ಸ್ ನ್ನು ನೀಡಲಾಗಿದ್ದು ಜನತೆಯ ಜೀವ ರಕ್ಷಣೆಗೆ ಬಳಕೆಯಾಗಲಿದೆ ಎಂದರು.
ಜೆಎಸ್‌ಡಬ್ಲ್ಯೂ ಸ್ಟೀಲ್ ಲಿ. ಸಂಸ್ಥೆಯ ರಾಜ್ಯ ಪ್ರಾಂತೀಯ ಸೇಲ್ಸ್ ಮ್ಯಾನೇಜರ್ ಶ್ರೀವತ್ಸ ಕಲುಮಂಗಿ ಮಾತನಾಡಿ, ಸಮಾಜಮುಖೀ ಚಟುವಟಿಕೆಯ ಭಾಗವಾಗಿ ಸಂಸ್ಥೆಯಿಂದ ಬೆಂಗಳೂರು, ಹುಬ್ಬಳ್ಳಿ ಗೋವಾದಲ್ಲಿ ಉಚಿತ ಅಂಬುಲೆನ್ಸ್ ಕೊಡುಗೆ ನೀಡಲಾಗಿದೆ. ಮಹಾರಾಷ್ಟ ಬಳ್ಳಾರಿಯಲ್ಲಿ ೨ಸಾವಿರ ಆಕ್ಸಿಜನ್ ಬೆಡ್ ನಿರ್ಮಿಸಲಾಗಿದೆ. ನಾಗರಿಕರ ಸೇವೆಯಲ್ಲಿ ಜೆಎಸ್‌ಡಬ್ಲ್ಯೂ ಸಂಸ್ಥೆ ಸದಾ ಮುಂದಿದೆ ಎಂದರು.
ಈ ಸಂದರ್ಭ ಮನಪಾ ಸದಸ್ಯ ರಾಜೇಶ್ ಸಾಲ್ಯಾನ್, ಗರೋಡಿ ಸ್ಟೀಲ್ ಸಂಸ್ಥೆಯ ಪಾಲುದಾರರಾದ ಬಿಂಬಾ ಮನೋಜ್, ಕನ್ಸಲ್ಟೆಂಟ್ ಗಿರೀಶ್ ರಾವ್, ಜನರಲ್ ಮ್ಯಾನೇಜರ್‌ಗಳಾದ ಸುಮಂತ್ ಮಲ್ಯ, ನಾಗರಾಜ್ ಎಸ್. ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.