ಅಗಣಿತ ಮಹಿಮಾನ್ವಿತರಾದ ಕೋಟಿ ಚೆನ್ನಯರು ಹಾಗೂ ಮಾತೆ ದೇಯಿ ಬೈದೆತಿಯ ಪುಣ್ಯ ನೆಲೆಯಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯು ಸಮಸ್ತ ಆಸ್ತಿಕ ಬಂಧುಗಳ ಭಕ್ತಿ,ಶ್ರದ್ದೆ,ಇಚ್ಚಾಶಕ್ತಿಯ ಕ್ಷೇತ್ರವೆನಿಸಿ ಅಭೂತಪೂರ್ವ ಜೀರ್ಣೊದ್ದಾರದೊಂದಿಗೆ ಕಂಗೊಳಿಸುತ್ತಿರುವುದು ಧನ್ಯ ಸಂಗತಿ.ವಿಶ್ವ ಬಿಲ್ಲವರ ಸ್ವಾಭಿಮಾನದ ಪ್ರತೀಕವೆಂಬಂತೆ ಈ ಸ್ಥಾನ ಬಿಂಬಿತಗೊಂಡಿದ್ದೂ ಹೆಮ್ಮೆಯ ಅಂಶ.ಸಮಸ್ತ ಭಕ್ತರ ಪವಿತ್ರ ತಾಣವಾಗಿ ದಿನದಿಂದ ದಿನಕ್ಕೆ ಉತ್ತುಂಗ ಸ್ಥಿತಿಯಲ್ಲಿದ್ದ ಇಲ್ಲಿ ಪ್ರಸಕ್ತ ಆಡಳಿತಾತ್ಮಕ ವಿಚಾರದಲ್ಲಿ ನ್ಯಾಯಾಲಯದವರೆಗೆ ಹೋಗಿರುವಂತದ್ದು ಖೇಧಕರ.
ಅಭಿಪ್ರಾಯ ವ್ಯತ್ಯಾಸ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಮತ್ತು ಎಲ್ಲರಲ್ಲಿ ಇರುವಂತದ್ದೆ.ಆದರೆ ಅದನ್ನೆ ಮುಖ್ಯವಾಗಿಸಿಕೊಂಡು ಹಠವಾದಿತನದ ಧೋರಣೆಯು ಸಮಸ್ತ ಭಕ್ತರಿಗೆ ಹಾಗೂ ಸಮಾಜಬಾಂಧವರಿಗೆ ನೋವಿನ ಸಂಗತಿ.ಇಡೀ ಸಮಾಜ ಹಲವಾರು ಒಳಿತಿನ ನಿರೀಕ್ಷೆಗಳನ್ನಿಟ್ಟುಕೊಂಡು ಮತ್ತು ಭಕ್ತಿಯ ನೆಲೆಯಲ್ಲಿ ತನುಮನಧನ ಸಹಕಾರ ನೀಡಿದ ಐತಿಹಾಸಿಕ ಸಂದರ್ಭಗಳನ್ನು ಮತ್ತು ಭವ್ಯ ಸಮಾರಂಭಗಳನ್ನು ಮರೆತು ಇದೀಗ ಪ್ರತಿಷ್ಠೆ ಮೆರೆಯಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ನ್ಯಾಯಾಲಯ ಎಂದಾಕ್ಷಣ ಅಲ್ಲಿ ನಿಯಮಾನುಸಾರವಾಗಿ ವಾದ ಪ್ರತಿವಾದದ ಬೆಳವಣಿಗೆಗಳು ಯಾವ ದಿನ ಕೊನೆಯಾಗುತ್ತದೆ ಎಂಬುದು ಸ್ಪಷ್ಟವಿಲ್ಲದ ವಿಚಾರ.ಆದುದರಿಂದ ನಮ್ಮ ಮುಖಂಡರುಗಳಾಗಲಿ,ಸ್ಥಳಕ್ಕೆ ಸಂಬಂಧ ಪಟ್ಟವರಾಗಲಿ ಎಲ್ಲಾ ಆತುರ, ಆಕ್ರೋಶಗಳನ್ನು ಕರಗಿಸಿಕೊಂಡು ಪ್ರಾತಃಸ್ಮರಣೀಯ ದೇಯಿಬೈದೆತಿ,ಕೋಟಿಚೆನ್ನಯರ ಕಾರ್ಣಿಕಕ್ಕೆ ಶರಣಾಗಿ ಎಲ್ಲ ಭಿನ್ನಮತಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸಮಂಜಸವಾಗಿದೆ.ಒಂದಷ್ಟು ಗೊಂದಲ ಹಾಗೂ ತಪ್ಪು ಸಂದೇಶಗಳು ಸಾರ್ವತ್ರಿಕಗೊಳ್ಳುವ ಮುಂಚೆಯೆ ನಮ್ಮ ನಡುವಿನ,ಸಹಮತ, ಸಹೋದರತ್ವ ಸಾಬೀತಾಗಲಿ.ನಾವೆಲ್ಲರೂ ಒಗ್ಗೂಡಿಕೊಂಡು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗೋಣ
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ).