ನವದೆಹಲಿ: ಈಗಾಗಲೇ ವೋಟರ್ ಐಡಿಗಳಿಗೆ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡೋ ಸಂಬಂಧದ ಚುನಾವಣಾ ತಿದ್ದುಪಡಿ ಮಸೂದೆಗೆ ( The Election Laws (Amendment) Bill, 2021 ) ಲೋಕಸಭೆಯಲ್ಲಿ ( Lok Sabha ) ವಿಪಕ್ಷಗಳ ವಿರೋಧದ ನಡುವೆಯೂ ಅನುಮೋದನೆ ದೊರೆತಿತ್ತು. ಇದೀಗ ಇಂದು ರಾಜ್ಯ ಸಭೆಯಲ್ಲಿಯೂ ( Rajya Sabha ) ಮಹತ್ವದ ವೋಟರ್ ಐಡಿಗೆ ಆಧಾರ್ ಲಿಂಕ್ ಮಸೂದೆಗೆ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಉಭಯ ಸದನಗಳಲ್ಲಿಯೂ ಮಸೂದೆ ಅಂಗೀಕರಿಸಲ್ಪಟ್ಟು, ರಾಷ್ಟ್ರಪತಿಗಳ ಅಂಕಿತವೊಂದೇ ಬಾಕಿ ಇದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ( Parliament Winter Session) ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಚುನಾವಣಾ ಕಾಯ್ದೆ (ತಿದ್ದುಪಡಿ) ಮಸೂದೆ 2021 ಮಸೂದೆಯನ್ನು ಮಂಡಿಸಲಾಗಿತ್ತು. ಡಿಸೆಂಬರ್ 20ರ ನಿನ್ನೆ ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ಸೂಚಿಸಲಾಗಿತ್ತು. ಇದಾದ ಬಳಿಕ ರಾಜ್ಯಸಭೆಯಲ್ಲೂ ಇಂದು ಮಸೂದೆ ಮಂಡಿಸಲಾಗಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ಸರ್ಕಾರವು ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿತು. “ಗುರುತನ್ನು ಸ್ಥಾಪಿಸುವ ಉದ್ದೇಶಕ್ಕಾಗಿ” ಮತದಾರರಾಗಿ ನೋಂದಾಯಿಸಲು ಬಯಸುವ ಜನರ ಆಧಾರ್ ಸಂಖ್ಯೆಯನ್ನು ಪಡೆಯಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅವಕಾಶ ನೀಡಲು ಮಸೂದೆ ಬಯಸುತ್ತದೆ.