ರೈಲು
ಎಲ್ಲರಂತಲ್ಲ ನಾನು…
ಬಯಲ ಬೆಳಕಿನಲ್ಲಿ ಕತ್ತಲು ಕೊರೆಯುವಲ್ಲಿ
ಓಡಬೇಕು; ಓಡುತ್ತಲೇ ಇರಬೇಕು
ಅಬ್ಬರದಿ ಬಂದೆರಗುವ ಜನಸಾಗರಕೆ ತೀರವಾಗಬೇಕು
ಶಾಂತವಾಗಿ ನಿರ್ವಾಹವಾಗಿ ಜೀವಜೀವಗಳ ನಿಜಬಂಧುವಾಗಿ
ತುಂಬಿಕೊಂಡಂತೆ ಖಾಲಿಯಾಗುತ್ತಲೇ ಇರಬೇಕು
ಜೀವನದ ಇತಿಮಿತಿಯಲಿ ಗತಿ ತಿರುಗಿದಂತೆ
ಹಳಿಗಳೂ ಬದಲಾಗುತ್ತವೆ, ಎಲ್ಲೋ ಕವಲೊಡೆದು ಇನ್ನೆಲ್ಲೋ ಕೂಡುತ್ತವೆ
ಉದ್ವೇಗ ಉನ್ಮಾದಗಳ ಬದಿಗೊತ್ತಿ ನಯನಾಜೂಕಿನಲಿ ನಡೆಯಬೇಕು
ಕೆಂಪು ನಿಶಾನೆಯೆದುರು ಸಮಾಧಾನಿಯಾಗಿರಬೇಕು
ಎಲ್ಲರಂತಲ್ಲ ನಾನು
ಕನಸಿಗೆ ಕಚಗುಳಿಯಿಟ್ಟು ನೂಕುವ ರಾಯಭಾರಿಯಾಗಬೇಕು
ಚಿಣ್ಣರ ಕೇಕೆ, ಹರೆಯದ ಬಯಕೆ, ಇಳಿವಯಸ್ಸಿನ ಬೇಗೆಗೆ
ನಿತ್ಯವೂ ಹೊಸ ಆಹ್ಲಾದವನೀಯುತ ಭರವಸೆಯ ಬೆಳಕಾಗಬೇಕು
ಮುಗ್ಗರಿಸಿದವರ ನೋವಿಗೆ ಸಾಂತ್ವನವಾಗಬೇಕು
ಅರಿವಿನ ಅರವಟಿಗೆಯಲಿ ಒಡಲು ಗಟ್ಟಿಯಾಗುತಿರಬೇಕು
ನವರಸ ಭಾವ ವಿಭಾವಗಳ ತಾಳಮೇಳದೊಳಗೆ
ಕೋಟಿ ಮನಸ್ಸುಗಳು ಹರಿಯುವುದು ನನ್ನೊಳಗೆ
ಸ್ವರ ವ್ಯಂಜನದೊಳು ಮೂಡಿದ ಬಿರುಕಿಗೆ ತೇಪೆ ಹಾಕಿ
ಸಮರಸ ಸಂಧಾನದ ಉಸಿರು ಚೆಲ್ಲಿ ಮುಂದಡಿಯಿಡಬೇಕು
ನನ್ನಾಂತರ್ಯದೊಳಿರುವ ಪ್ರೇಮ, ವಿರಹ ಗೀತೆಗಳೆಷ್ಟೋ…!
ಕಣ್ಣಂಜಿಕೆಗೆ ಮುಖ ಮರೆಸಿ ಕೂತ ಗುಟ್ಟುಗಳೆಷ್ಟೋ…!
ಯುಗಯುಗಾಂತರದಲಿ ಘಟಿಸಿ ಹೋದ ಕತೆಗಳಲೂ
ಮುಖ್ಯ ಪಾತ್ರಧಾರಿ, ಪರಮ ಸೂತ್ರಧಾರಿಯೂ ನಾನೇ
ಎಲ್ಲರಂತಲ್ಲ ನಾನು
ಸಾಗುತ್ತಲೇ ಇರಬೇಕು
ನಿಂತರೆ ಸ್ತಬ್ದವಾಗಬಹುದಲ್ಲವೇ ಯಾನ…!
ನಗರದ ನರನಾಡಿಗಳಲಿ ಪವಹಿಸಿ ಪಥಿಕರ ಗಮ್ಯವಾಗಬೇಕು
ನಿತ್ಯ ಪಥದ ಧ್ಯಾನಿಯಾಗಬೇಕು.
✍🏻 ಅನಿತಾ ಪಿ. ತಾಕೊಡೆ