ಕದ್ರಿ ಮಂಜುನಾಥ ದೇವಸ್ಥಾನ,ಪಣಂಬೂರು ನಂದನೇಶ್ವರ ದೇವಸ್ಥಾನಕ್ಕೂ ಬಿಲ್ಲವರಿಗೂ ಪ್ರಾಚೀನ ನಂಟು
ಬಿಲ್ಲವ ಸಮಾಜದ ಪ್ರಮುಖರಾದ ಅರಸಪ್ಪನವರು 1865ರಲ್ಲಿ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಬಿಲ್ಲವರಿಗೆ ಪ್ರವೇಶ ಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು ಆದರೆ ಪ್ರಯೋಜನ ಆಗಲಿಲ್ಲ. ಈ ನೆಲವನ್ನು ಆಳಿದ ಬಿಲ್ಲವರಿಗೂ ಕದ್ರಿ ದೇವಸ್ಥಾನಕ್ಕೂ ಪ್ರಾಚೀನ ನಂಟು. ಈ ದೇವಸ್ಥಾನದ ಬದಿಯಲ್ಲೇ ಪೂರ್ವ ದಿಕ್ಕಿನಲ್ಲಿ ಬಿಲ್ಲವರ ಮನೆ ಇದ್ದು, ಆ ಮನೆತನದವರೇ ಇಲ್ಲಿಯ ದುರ್ಗಾದೇವಿಗೆ ವಜ್ರದ ಮೂಗುತಿಯನ್ನು ಮತ್ತು ಮಂಜುನಾಥನಿಗೆ ಕಂಚಿನ ದೀಪದಾನಿಯನ್ನು ಹರಕೆಯಾಗಿ ಒಪ್ಪಿಸಿದರೆಂದು ಐತಿಹ್ಯಗಳ ಉಲ್ಲೇಖವಿದೆ. “ನಿಮ್ಮ ವಂಶದವರಿಂದಲೇ ಮಂಜುನಾಥನ ಜಾತ್ರೆಗಳ ಸಮಯದಲ್ಲಿ ಕಂಚಿನ ಹಣತೆಗಳಲ್ಲೂ ದೀಪ ಹಚ್ಚಿ ಬೆಳಗಲಿ ಎಂದು ಜೋಗಿ ಪುರುಷರು ಹರಸಿದರು ಎನ್ನಲಾಗಿದೆ. ಈ ಹೇಳಿಕೆಯ ಅನುಗುಣ ಇಂದೂ ಕೂಡ ಬಿಲ್ಲವರೇ ದೀಪದಾನಿಗೆ ಮೊದಲು ಏಳು ದೀಪದ ಬತ್ತಿಗಳನ್ನು ಹಚ್ಚುವ ಸಂಪ್ರದಾಯ ಉಳಿದು ಬಂದಿದೆ. ಈಗ ಕದ್ರಿಯ ಶೇಷ ಪೂಜಾರಿಯವರ ಮಗ ರಾಜೇಂದ್ರ ಪೂಜಾರಿ ಕದ್ರಿ ಮತ್ತು ಕಂಚಿ ದೀಪಾಳೆಯ ಅಮೀನ್ ಕುಟುಂಬಿಕರು ಈ ಸಂಪ್ರದಾಯ ನೆರವೇರಿಸುತ್ತಿದ್ದಾರೆ.
ಪಣಂಬೂರಿನ ನಂದನೇಶ್ವರ ದೇವಸ್ಥಾನದ ಪ್ರವೇಶಕ್ಕೂ 1943ರ ಸಮಯದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿಯೂ ಬಿಲ್ಲವರಿಗೆ ನ್ಯಾಯ ಸಿಗಲಿಲ್ಲ. *ಬಿಲ್ಲವರಾಗಿದ್ದ ಆಳುಪ ರಾಜ ಮನೆತನದವರು 15ನೆ ಶತಮಾನದ ಆರಂಭದಿಂದ ರಾಜ ಗದ್ದುಗೆ ಮತ್ತು ಗುತ್ತಿನ ಮನೆಗಳನ್ನು ಕಳಕೊಂಡರು. ನಾನಾ ಕಾರಣಗಳಿಂದ ಬಿಲ್ಲವರು ಕ್ರಮೇಣ ಬಲಹೀನರಾಗುತ್ತ ಶೋಷಣೆಗೆ ಒಳಗಾಗಿ ಅಸ್ಪೃಶ್ಯರೆನಿಸಿಕೊಂಡರು. ಪರಿಣಾಮವಾಗಿ ಬಿಲ್ಲವರಿಗೆ ಕರಾವಳಿ ಕರ್ನಾಟಕದ ದೇವಸ್ಥಾನಗಳಲ್ಲಿ ಪ್ರವೇಶ ನಿಷಿದ್ದ ಎಂದು ಬಲಾಡ್ಯರಾದವರು ತೀರ್ಮಾನಿಸಿದರು.
”ಇಂದಿಗೆ ಸುಮಾರು 350 ವರ್ಷಗಳ ಹಿಂದೆ ಕದ್ರಿಯ ಶ್ರೀ ಮಠದ ರಾಜಪೀಠವನ್ನು ಅಲಂಕರಿಸಿದ ಅರಸರು (ನಾಥಪಂಥದ ಗುರುಪೀಠವೇರಿದವರು) ಮಂಜುನಾಥ ದೇವರ ಪೂಜೆಗಾಗಿ ಬ್ರಾಹ್ಮಣ ಅಪ್ಪಯ್ಯ ಭಟ್ಟ ಎಂಬುವರನ್ನು ನೇಮಿಸಿದರು” ಇಲ್ಲಿಂದ ಮುಂದೆ ಕದ್ರಿ ಮಂಜುನಾಥನ ಪೂಜೆ ಬ್ರಾಹ್ಮಣರಿಂದ ಶೈವಾಗಮನ ಪದ್ಧತಿಯಂತೆ ಆರಂಭವಾಯಿತು. ಕ್ರಮೇಣ ಅದು ವಂಶ ಪಾರಂಪರ್ಯವಾಯಿತು. ಬ್ರಾಹ್ಮಣ ಅರ್ಚಕರು ದೇವಸ್ಥಾನ ಬ್ರಾಹ್ಮಣರದ್ದೆಂದು ನಾಥಪಂತದ ಗುರುವಿಗೆ ಮಂಜುನಾಥನ ದೇವಸ್ಥಾನ ಪ್ರವೇಶವನ್ನು ನಿಷೇಧಿಸಿದರು. ನಾಥಪಂಥದ ಗುರು ಶ್ರೀ ಟೆಹಲನಾಥ್ ಸ್ವಾಮೀಜಿ 1914 – 1915 ಸಮಯದಲ್ಲಿ ಕೋರ್ಟಿನಲ್ಲಿ ತಮಗಾದ ನಿಷೇಧದ ಬಗೆಗೆ ವ್ಯಾಜ್ಯ ಹೂಡಿದರು. ಆ ಸಮಯದಲ್ಲಿ ಸಿವಿಲ್ ಜಡ್ಜ್ ಆಗಿದ್ದ ಬಿಲ್ಲವರಾದ ಮುಂಡಪ್ಪ ಬಂಗೇರರು ನ್ಯಾಯದಾನ ಮಾಡುವ ಮೊದಲು ದೇವಸ್ಥಾನವನ್ನು ವೀಕ್ಷಿಸಲು ಅಪೇಕ್ಷೆ ಪಟ್ಟರು. ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಗರ್ಭಗೃಹವನ್ನು ಹೊಕ್ಕು, ವೀಕ್ಷಿಸಿ ಜೋಗಿಗಳ ಪರವಾಗಿ ತೀರ್ಪನ್ನಿತ್ತರು.
ಮುಂಡಪ್ಪನವರು ದೇವಸ್ಥಾನ ಹೊಕ್ಕಿದ್ದರಿಂದ ಅದು ಅಪವಿತ್ರವಾಯಿತೆಂದು 7-5-1916 ರವಿವಾರ ಬ್ರಹ್ಮ ಕಳಸ ಮಾಡಿ ದೇವರು ಮತ್ತು ದೇವಸ್ಥಾನವನ್ನು ಶುದ್ದೀಕರಣ ಮಾಡಿದರು. ನ್ಯಾಯಾಲಯ ಜೋಗಿಗಳ ಪರವಾಗಿ ನ್ಯಾಯ ಕೊಟ್ಟಿತು. ಆದರೆ ಬಲಾಡ್ಯರ ಎದುರು ಆ ನ್ಯಾಯವನ್ನು ದಕ್ಕಿಸಿಕೊಳ್ಳಲು ಜೋಗಿಗಳಿಗೆ ಆಗಲೇ ಇಲ್ಲ.
ನಾರಾಯಣ ಗುರುಗಳು ಶೋಷಿತ ಜನಾಂಗಕ್ಕೆ ನಾನಾ ರೂಪಗಳಿಂದ ಶಕ್ತಿಯನ್ನು ಪ್ರಧಾನ ಮಾಡುತ್ತಿದ್ದ ಕಾಲ. 1908 ಮಂಗಳೂರಿನ ಕೆಲವು ಬಿಲ್ಲವ ಪ್ರಮುಖರು ಸಭೆ ಸೇರಿ ಶ್ರೀ ನಾರಾಯಣ ಗುರು ದೇವರನ್ನು ಮಂಗಳೂರಿಗೆ ಕರೆದು ತರುವ ನಿರ್ಣಯ ಮಾಡಿದರು. ಹೊಯಿಗೆ ಬಜಾರ್ ಕೊರಗಪ್ಪ, ಶೆಡ್ಡೆ ಸೋಮಯ್ಯ ಮೇಸ್ತ್ರಿ, ಐತಪ್ಪ ಪೂಜಾರಿ, ಅಮ್ಮಣ ಮೇಸ್ತ್ರಿ, ಕಂಟ್ರಾಕ್ಟರ್ ದೂಮಪ್ಪ ಮುಂತಾದ ಬಿಲ್ಲವ ಪ್ರಮುಖರು ಕೇರಳಕ್ಕೆ ಹೋಗಿ ಗುರುದೇವರನ್ನು ಕಂಡು ಅವರನ್ನು ಮಂಗಳೂರಿಗೆ ಕರೆತರುವಲ್ಲಿ ಸಫಲರಾದರು. 1908ರಲ್ಲಿ ಗುರುಗಳು. ಮಂಗಳೂರಿಗೆ ಬಂದರು. ಅವರನ್ನು ಸಂಭ್ರಮದಿಂದ ಮಂಗಳೂರಿನಲ್ಲಿ ಸ್ವಾಗತಿಸಲಾಯಿತು. ಗುರುಗಳು ಬಿಲ್ಲವರ ಸ್ಥಿತಿಗತಿ ಗಳನ್ನು ತಿಳಿದುಕೊಂಡರು. ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ರ ಕೊಡಬೇಕೆಂದೂ, ಬಿಲ್ಲವರು ಮೂರ್ತೆಗಾರಿಕೆಯನ್ನು ಬಿಡಬೇಕೆಂದು ಹೇಳಿದರು. ಕೈಮಗ್ಗ, ಗುಡಿಕೈಗಾರಿಕೆ, ಕೃಷಿ ಮತ್ತು ವ್ಯಾಪಾರ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ತಿಳಿಸಿದರು. ಸಂಘಟಿತರಾಗಿ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಿರೆಂದು ಬೋಧಿಸಿದರು.
(ಆಧಾರ;ಶ್ರೀ ನಾರಾಯಣ ಗುರು ವಿಜಯ ದರ್ಶನ- ಬಾಬು ಶಿವಪೂಜಾರಿ)
ಸಂಗ್ರಹ- ರಾಜೇಂದ್ರ ಚಿಲಿಂಬಿ