TOP STORIES:

ಜಯವುಲ್ಲ ಬೆಮ್ಮೆರ್


Author Venkatesh Karkera

ಬೈದರ್ಕಳ ಪಾಡ್ದನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಬುದ್ಯಂತನನ್ನು ಕೊಲ್ಲುವ ಪ್ರಕರಣದಲ್ಲಿ “ಬುದ್ಯಂತನ್ ಜಯಿಪುನು” (ಬುದ್ಯಂತನನ್ನು ಜಯಿಸುವುದು) ಎಂಬ ಪದಪ್ರಯೋಗ ಕಂಡುಬರುತ್ತದೆ. ಆದರೆ ಮುಂದಕ್ಕೆ ಅದೇ ಬೈದರ್ಕಳು ಚಂದುಗಿಡಿಯನ್ನು ಕೊಲ್ಲುವಾಗ ಚಂದುಗಿಡಿಯನ್ನು ಕೊಂದಿದ್ದು ಎನ್ನಲಾಗುತ್ತದೆಯೇ ಹೊರತು ಜಯಿಸಿದ್ದು ಎನ್ನಲಾಗುವುದಿಲ್ಲ. ಬುದ್ಯಂತ ಪಡುಮಲೆಯ ಮಹಾಮಂತ್ರಿಯಾದರೆ ಚಂದುಗಿಡಿ ಪಂಜದ ಮಹಾಮಂತ್ರಿಯಾಗಿದ್ದ. ಇಬ್ಬರೂ ಸಮಾನ ಸ್ಥಾನಮಾನ ಹೊಂದಿದ್ದರೂ ಇಬ್ಬರ ವಧೆಯನ್ನು ಬೇರೆಬೇರೆ ಹೆಸರಿಂದ ಕರೆಯಲಾಗಿದೆ. ಅದರಲ್ಲೂ ವಿಶೇಷವೆಂದರೆ ಚಂದುಗಿಡಿಯನ್ನು ಕೊಂದಿದ್ದು ಯುದ್ದರಂಗದಲ್ಲಿ, ಅಲ್ಲಾದರೆ ಸಾಮಾನ್ಯ ಭಾಷಾ ಬಳಕೆಯಂತೆ ಕೊಲ್ಲುವುದು ಎನ್ನುವ ಬದಲು ಜಯಿಸುವ ಮಾತು ಬರಬೇಕಿತ್ತು. ಆದರೆ ಅಲ್ಲಿ ಹಾಗೆ ಅಂದಿಲ್ಲ. ಇನ್ನೊಂದೆಡೆ ಬುದ್ಯಂತನ ಪ್ರಕರಣದಲ್ಲಿ ಆತನನ್ನು‌ ಕೊಂದಿದ್ದು ಕೃಷಿ ಮಾಡುವ ಗದ್ದೆಯ ಬದಿಯಲ್ಲಿ. ಅದೂ ನಿರಾಯುಧನಾಗಿದ್ದ ವ್ಯಕ್ತಿಯೊರ್ವನನ್ನು ಇಬ್ಬರು ಯುವ ವೀರರು ಸೇರಿ ಕೊಂದದ್ದು. ಆದರೂ ಅದು ಜಯವೆನಿಸಿಕೊಂಡಿತೇ ಹೊರತು ಕೊಲೆಯೆಂದಲ್ಲ. ಹಾಗಿದ್ದಲ್ಲಿ ಈ ಜಯಿಪುನು ಎನ್ನುವ ಪದದ ಹಿಂದಿನ ಧ್ವನಿಯೇನು?

@https://prajnaanambrahmah.wordpress.com/
ಜಯಿಸುವುದು ಎಂದರೆ ಕೇವಲ ಎದುರಾಳಿಯನ್ನು ಸೋಲಿಸುವುದು ಅಥವಾ ಕೊಲ್ಲುವುದು ಅಲ್ಲ. ಜಯಿಸುವುದು ಎಂದರೆ ಅಧರ್ಮವನ್ನು ಅಂತ್ಯಗೊಳಿಸಿ ಧರ್ಮವನ್ನು ಮತ್ತೆ ಎತ್ತಿಹಿಡಿಯುವುದು. ಬುದ್ಯಂತನ ವಧೆಯೊಂದಿಗೆ ಪಡುಮಲೆಯ ಊರಲ್ಲಿ ತಾಂಡವವಾಡುತ್ತಿದ್ದ ಅಧರ್ಮದ ಯುಗಾಂತ್ಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬುದ್ಯಂತನನ್ನು ಬೈದರ್ಕಳು ಇಬ್ಬರೂ ಸೇರಿ ವಧಿಸಿದ್ದಾರೆ. ಮುಂದಕ್ಕೆ ಎಣ್ಮೂರಿನ ಯುದ್ದದಲ್ಲಿ ಅವರಿಬ್ಬರೂ ಏಕಾಂಗಿಯಾಗಿ ಹಲವರನ್ನು ಕೊಂದಿರಬಹುದಾದರೂ ಬೇರೆ ಯಾರನ್ನೂ ಇಬ್ಬರೂ ಸೇರಿ ಕೊಂದ ಉಲ್ಲೇಖವಿಲ್ಲ‌. ಚಂದುಗಿಡಿಯನ್ನೂ ಚೆನ್ನಯ ಬೈದ್ಯರು ಏಕಾಂಗಿಯಾಗೇ ಎದುರಿಸಿ ಕೊಲ್ಲುತ್ತಾರೆ. ಹಾಗಿದ್ದಲ್ಲಿ ಬುದ್ಯಂತನ ಪ್ರಕರಣದಲ್ಲಿ ಮಾತ್ರ ಇಬ್ಬರೂ ಸೇರಿ ವಧೆ ಮಾಡಿದ್ದಾರೆ ಎಂದಮೇಲೆ ಬುದ್ಯಂತನ ವಧೆಯೇ ಬೈದರ್ಕಳ ಅವತಾರದ ಉದ್ದೇಶವೆಂಬುದರಲ್ಲಿ ಸಂಶಯವಿಲ್ಲ. ಅದಲ್ಲದೆ ಈ ಘಟನೆ ಬೈದರ್ಕಳ ಕಥೆಯ ನಿರ್ಣಾಯಕ ತಿರುವು ಎನ್ನುವುದು ತಮಗೆ ಮುಂದಕ್ಕೆ ಅರ್ಥವಾಗಬಹುದೆಂದುಕೊಳ್ಳುತ್ತೇನೆ . ಬುದ್ಯಂತನ ವಧೆಯ ಮೂಲಕ ಧರ್ಮವನ್ನು ಮರುಸ್ಥಾಪಿಸಿದ್ದರ ಧ್ಯೋತಕವಾಗಿ ಬುದ್ಯಂತನ್‌ ಜಯಿಪುನು ಎನ್ನಲಾಗಿದೆ. ಬೈದರ್ಕಳ ಸಣ್ಣ ಬದುಕಿನಲ್ಲಿ‌ ಅವೆಷ್ಟೋ ಘಟನೆಗಳು‌ ಆಗಿಹೋಗಿವೆ. ಆದರೆ ಆ ಪೈಕಿ ಬುದ್ಯಂತನ್ ಜಯಿಪುನು ಎಂಬುದು ಮಾತ್ರ ಇಂದಿಗೂ ಬೈದರ್ಕಳ ನೇಮದಲ್ಲಿ ಕೂಡಾ ಒಂದು‌ ಕಟ್ಲೆಯಾಗಿ ಉಳಿದುಕೊಂಡಿದೆ. ಅವರ ಬದುಕು ಮತ್ತು ನೇಮ ಎರಡರಲ್ಲೂ ಎದ್ದು ತೋರುವ ಅಪರೂಪದ ಘಟನೆಗಳಲ್ಲಿ ಬುದ್ಯಂತನ್ ಜಯಿಪುನು ಎಂಬುದೇ ಅತ್ಯಂತ ಪ್ರಮುಖವಾದದ್ದು.

https://prajnaanambrahmah.wordpress.com/
ಸಾಮಾನ್ಯವಾಗಿ ಆರಾಧನಾ ಪರಂಪರೆಯಲ್ಲಿ ಯಾವುದೋ ಒಂದು ತತ್ವವನ್ನೋ/ ಬದುಕಿನ ಪಾಠವನ್ನೋ/ ತಪ್ಪಿಗೆ ಸಿಗುವ ಶಿಕ್ಷೆಯನ್ನೋ ಮುಂದಿನ ತಲೆಮಾರಿನ ನೆನಪಿನಲ್ಲಿ ಉಳಿಸುವ ಉದ್ದೇಶದಿಂದ ಕೆಲವೊಂದು ವಿಧಿಯನ್ನೋ ಯಾ ನಿಷೇಧವನ್ನೋ ಮಾಡಲಾಗುತ್ತದೆ. ಉದಾಹರಣೆಗೆ ಕೆಲವೊಂದು ಕಡೆ ದೈವಸ್ಥಾನಗಳಲ್ಲಿ ಕೆಲವು ಅನ್ಯಮತೀಯರ ವಿಗ್ರಹಗಳಿರುವುದಿದೆ. ಅದರರ್ಥ ನಾವು ಅವರನ್ನು ಆರಾಧಿಸಬೇಕೆಂದಲ್ಲ. ಅವರು ಮಾಡಿದ ಯಾವುದೋ ಒಂದು ತಪ್ಪಿಗೆ ಆ ಕ್ಷೇತ್ರದ ದೈವ ಅವರಿಗೆ ನೀಡಿದ ಶಿಕ್ಷೆಯನ್ನು ತಮ್ಮ ಮುಂದಿನ ಪೀಳಿಗೆಯ ನೆನಪಿನಲ್ಲಿ ಉಳಿಯಬೇಕು ಮತ್ತು ಆ ಮೂಲಕ ಅಂತಹ ತಪ್ಪಿನ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕೆಂದು ಇಂತಹ ವಿಗ್ರಹಗಳನ್ನೋ ಪ್ರತೀಕಗಳನ್ನೋ ನಿರ್ಮಿಸಿಡಲಾಗಿದೆ. ಆದರೆ ನಾವಿಂದು ದೈವಸ್ಥಾನದ ಆವರಣದ ಒಳಗಿರುವ ಎಲ್ಲದಕ್ಕೂ ಕೈ ಮುಗಿದು ಬರುತ್ತೇವೆಯೇ ಹೊರತು ಅದ್ಯಾಕೆ ಅಂತಹ ಪ್ರತೀಕಗಳು ದೇವಸ್ಥಾನದ ಒಳಗಿವೆ ಎಂದು ಪ್ರಶ್ನಿಸುವುದನ್ನೇ ಮರೆತಿದ್ದೇವೆ. ಕೆಲವೆಡೆ ಕಾಂತೇರಿ ಜುಮಾದಿ ನೇಮದಲ್ಲಿ ದೈವದ ಅಣಿಯ ಹಿಂದೆ ದೇವುಪೂಂಜರ ಮುಖದ ಪ್ರತೀಕವನ್ನು ತೂಗಿಬಿಡುವುದನ್ನು ಕಂಡಿರಬಹುದು. ದೇವುಪೂಂಜನೆಂಬ ವ್ಯಕ್ತಿಯನ್ನು ವೈಭವೀಕರಿಸುವುದೋ ಅಥವಾ ಸ್ಮರಣೀಯವಾಗಿಸುವುದೋ ಅದರ ಉದ್ದೇಶವಲ್ಲ. ಬದಲಾಗಿ ದೈವಕ್ಕೆ ತಪ್ಪಿನಡೆದಾಗ ಸಿಗುವ ಶಿಕ್ಷೆಯನ್ನು ಮುಂದಿನ ಪೀಳಿಗೆಗೆ ನೆನಪಿಸುವುದು ಆ ಕಟ್ಲೆಯ ಉದ್ದೇಶ. ಅದೇ ರೀತಿ ಬುದ್ಯಂತನ ವಧೆಯ ಮಹತ್ವವನ್ನೂ ಮುಂದಿನ ತಲೆತಲೆಮಾರುಗಳು ನೆನಪಿಡಬೇಕು ಎಂಬ ಉದ್ದೇಶದಿಂದ ಬುದ್ಯಂತನ ವಧೆಗೆ ‘ಬುದ್ಯಂತನ್ ಜಯಿಪುನು’ ಎಂಬ ಹೆಸರಿನಿಂದ ನೇಮದ ಕಟ್ಲೆಗಳಲ್ಲಿ ಒಂದಾಗಿ ಉಳಿಸಿಕೊಳ್ಳಲಾಗಿದೆ. ಆದರೆ ಜಯಿಪುನು ಎಂಬ ಪದವೇ ಏಕೆ?

https://prajnaanambrahmah.wordpress.com/
ಜಯವೆಂಬ ಪದದ ಅರ್ಥವ್ಯಾಪ್ತಿ ಬಹಳ ವಿಶಾಲವಾದದ್ದು. ಮಹಾಭಾರತದ ಮೂಲ ಹೆಸರು ಜಯ ಎನ್ನುವುದು ತಮಗೆ ಗೊತ್ತಿರಬಹುದು. ಅಲ್ಲಿ ಜಯವೆಂಬುದು ಅದರ ಕಥಾನಾಯಕನಾದ ಭಗವಂತನ ನಾಮಗಳಲ್ಲಿ ಒಂದು. ಜಯವೆಂಬುದು ಭಗವಂತನಿರುವೆಡೆ ಮಾತ್ರ ಇರುವ ತತ್ವವೂ ಹೌದು. ಜಯ ಎಂಬುದು ಸಂಖ್ಯಾಶಾಸ್ತ್ರದ ಪ್ರಕಾರ ಸಂಖ್ಯೆ ಹದಿನೆಂಟನ್ನು ಸೂಚಿಸುತ್ತದೆ. ಹಾಗಾಗಿಯೇ ಹದಿನೆಂಟು ಅಧ್ಯಾಯಗಳಿರುವ ಹದಿನೆಂಟನೇ ತತ್ವವಾದ ಭಗವಂತನ ಲೀಲಾವಿನೋದವನ್ನು ವರ್ಣಿಸುವ ಕಥನವಾದ ಮಹಾಭಾರತಕ್ಕೆ ಜಯವೆಂದು ಹೆಸರು. ಹದಿನಾರು ಕಲೆಗಳಿಂದ ಬಂಧಿತನಾದ ಜೀವನಿಗಿಂತ ಮೇಲಿರುವುದು ಹದಿನೇಳನೇ ತತ್ವವಾದ ಪ್ರಕೃತಿ. ಆ ಪ್ರಕೃತಿಯನ್ನೂ ತನ್ನ ಒಡೆತನದಲ್ಲಿರಿಸಿಕೊಂಡು ಎಲ್ಲವನ್ನೂ ನಿಯಂತ್ರಿಸುವವನೇ ಹದಿನೆಂಟನೇ ತತ್ವವಾದ ಪರಮಪುರುಷ. ಅದಕ್ಕಾಗಿಯೇ ಶಬರಿಮಲೆಯಲ್ಲಿ ಹದಿನೆಂಟು ಮೆಟ್ಟಿಲುಗಳನ್ನು ಏರಿಹೋದಾಗ ಮಾತ್ರ ಧರ್ಮಶಾಸ್ತಾರನು ಕಾಣುವುದು. ಹದಿನೆಂಟರ ಒಂದು ಮತ್ತು ಎಂಟನ್ನು ಕೂಡಿಸಿದರೆ ಪೂರ್ಣತ್ವದ ಸಂಕೇತವಾದ ಒಂಬತ್ತು ಸಿಗುತ್ತದೆ. ೯ರ ಎಲ್ಲಾ ಗುಣಕಗಳ ಮೊತ್ತ ಯಾವತ್ತೂ ಒಂಬತ್ತೇ ಆಗಿರುತ್ತದೆ. ಹಾಗಾಗಿ ಒಂಬತ್ತು ಮತ್ತು ಅದರ ಗುಣಕಗಳು ಪೂರ್ಣತ್ವದ ಅಥವಾ ಭಗವಂತನ ಸಂಕೇತವೆಂದು ನಂಬಲಾಗಿದೆ. ತಮಗೆ ನಮ್ಮ ಹಿರಿಯರು ಹೇಳುತ್ತಿದ್ದ “ಎಂಕ್ಲೆಗ್ ಒಂಜಿ ತೆರಿಂಡ ಒರ್ಂಬ ತೆರಿಯಂದ್” ಎಂಬ ಮಾತು ನೆನಪಿರಬಹುದು. ನಮ್ಮ ಜ್ಞಾನವೇನಿದ್ದರೂ ಲೌಕಿಕ ಜ್ಞಾನವೇ‌ ಹೊರತು ಭಗವಂತನಂತಹ ಪೂರ್ಣಜ್ಞಾನವಲ್ಲ. ಹಾಗಾಗಿ ಅಲ್ಲಿ ಇತರ ಸಂಖ್ಯೆಗಳನ್ನು ನಮ್ಮ ಲೌಕಿಕ ಜ್ಞಾನದ ಪ್ರತೀಕವಾಗಿಯೂ ಒಂಬತ್ತನ್ನು ಭಗವಂತನ ಪೂರ್ಣತ್ವದ ಪ್ರತೀಕವಾಗಿಯೂ ಬಳಸಲಾಗಿದೆ. ಹಾಗಾಗಿ‌ ಇಲ್ಲಿ ಒಂಬತ್ತು ಎಂದರೆ ಪೂರ್ಣನಾದ ಭಗವಂತ ಅಥವಾ ಬೆಮ್ಮೆರ್ ಎಂದೇ ಅರ್ಥ. ಇನ್ನು ಧರ್ಮವಿದ್ದಲ್ಲಿ ಮಾತ್ರ ಭಗವಂತನಿರುತ್ತಾನೆಯೇ ಹೊರತು ಅಧರ್ಮದೊಂದಿಗಲ್ಲ. ಆತನೇ ಸ್ವತಃ ಧರ್ಮವೂ ಹೌದು. ಇಂತಹ ಪರಿಪೂರ್ಣನಾದ ಭಗವಂತನಿದ್ದಲ್ಲಿ ಮಾತ್ರ ಜಯವಿರಲು‌ ಸಾಧ್ಯ. “ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ | ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ” ಭಗವದ್ಗೀತೆಯ ಸಾಲುಗಳು ನೆನಪಾಗುತ್ತಿವೆಯೇ? ಅದಕ್ಕಾಗಿಯೇ ನಮ್ಮ ತುಳು ಪಾಡ್ದನಗಳಲ್ಲಿ ತುಳುವರ ಆರಾಧ್ಯಮೂರ್ತಿಯಾದ ಬೆಮ್ಮೆರ್‌ರನ್ನು ‘ಜಯವುಲ್ಲ ಬೆಮ್ಮೆರ್’ ಎಂದು ಕರೆಯಲಾಗಿದೆ.

https://prajnaanambrahmah.wordpress.com/
ಒಂದೆಡೆ ಬೆಮ್ಮೆರ್‌ರನ್ನು ಜಯವುಲ್ಲ ಬೆಮ್ಮೆರ್ ಎಂದರೆ, ಇನ್ನೊಂದೆಡೆ ಬೈದರ್ಕಳು ಬುದ್ಯಂತನ್ ಜಯಿಪುನು ಎಂದು ಹೇಳಲಾಗಿದೆ. ಅದ್ಯಾಕೆ ಬೆಮ್ಮೆರ್‌ರಿಗೆ ಬಳಕೆಯಾದ ವಿಶೇಷಣವನ್ನೇ ಬೈದರ್ಕಳಿಗೂ ಅನ್ವಯಿಸಲಾಗಿದೆ? ಯಾಕೆಂದರೆ ಬೆಮ್ಮೆರ್ ಮತ್ತು ಬೈದೆರ್ಕಳಲ್ಲಿ ಭೇದವಿಲ್ಲ. ಬೈದರ್ಕಳು ಇಲ್ಲದೆ ಬೆಮ್ಮೆರ್ ಇಲ್ಲ, ಬೆಮ್ಮೆರ್ ಇಲ್ಲದೆ ಬೈದರ್ಕಳಿಲ್ಲ. ಒಂದು ಎರಡಾಗಿ‌ ಹುಟ್ಟಿ ಒಂದಾಗಿ ಬದುಕಿ‌ ಕೊನೆಗೊಮ್ಮೆ ಮತ್ತೆ ಎರಡು ಒಂದಾಗುವ ಸುಂದರ ಕಥಾನಕವೇ ಬೈದರ್ಕಳ ಕಥೆ. ಮೂಲಾಧಾರದಿಂದ ಆಜ್ಞಾದ ವರೆಗೆ ಎಣೆ ಹಾಕಿಕೊಳ್ಳುತ್ತಾ ಮೇಲೇರುವ ಇಡಾ ಮತ್ತು ಪಿಂಗಳಗಳ ಮಧ್ಯೆ ಇರುವ ಸುಷುಮ್ನಾದ ಒಳಗಡೆ ಸುಪ್ತವಾಗಿ ಹರಿಯುವುದೇ ಬ್ರಹ್ಮನಾಡಿ. ಆಜ್ಞಾದಲ್ಲಿ ಇಡಾ-ಪಿಂಗಳಗಳೆರಡೂ ಬ್ರಹ್ಮವನ್ನು ಸೇರಿ ಬ್ರಹ್ಮನಾಡಿಯೇ ಆಗಿ ಬ್ರಹ್ಮರಂಧ್ರದ ಮೂಲಕ ಹರಿದು ಸಹಸ್ರಾರವನ್ನು ಮುಟ್ಟುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆವು. ಈ ಮೂರು ಶಕ್ತಿಗಳನ್ನು ಕಥೆಯಲ್ಲಿ ಲೌಕಿಕರಿಗೆ ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಬೆಮ್ಮೆರ್‌ರ ಎಡಬಲದಲ್ಲಿರುವ ಜೋಡಿನಾಗಗಳು ಎನ್ನಲಾಗಿದೆ. ಈ ಉತ್ತರ ಎಲ್ಲರಿಗೂ ತೃಪ್ತಿ ಕೊಡಬಹುದೆಂಬ ನಿರೀಕ್ಷೆಯಿಲ್ಲ. ಹಾಗಾಗಿ ಬೈದರ್ಕಳ ಕಥೆಯಲ್ಲಿ‌ ಬರುವ ಸನ್ನಿವೇಶವೊಂದನ್ನು ನೋಡೋಣ. ಪಡುಮಲೆಯ ಬಲ್ಲಾಳರ ಆಶ್ರಯದೊಂದಿಗೆ ತಮ್ಮ ಸೋದರಮಾವ ಸಾಯಣ ಬೈದ್ಯರ ಮನೆಯಲ್ಲಿ ಬೆಳೆಯುವ ಬೈದರ್ಕಳು (ನೆಪಮಾತ್ರಕ್ಕೆ) ವಿದ್ಯೆ ಕಲಿಯಲೆಂದು ದೂರದ ಕಟಪಾಡಿಗೆ ತೆರಳುತ್ತಾರೆ. ವಿದ್ಯೆ ಕಲಿತು ಪಡುಮಲೆಗೆ ಹಿಂದಿರುಗಿದ ಬೈದರ್ಕಳು ಬಲ್ಲಾಳರನ್ನು ಕಾಣಲೆಂದು ಪಡುಮಲೆಯ ಬೀಡಿಗೆ ಹೋಗುತ್ತಾರೆ. ಬೀಡಿನ ಚಾವಡಿಯಲ್ಲಿ ಕುಳಿತು ದೂರದಿಂದಲೇ ಬೈದರ್ಕಳು ಬರುತ್ತಿರುವುದನ್ನು ಗಮನಿಸಿದ ಪಡುಮಲೆಯ ಬಲ್ಲಾಳರು “ಇರುವೆರ್ ಬೆಮ್ಮೆರ್ ಬರುತ್ತಿರುವಂತೆ ಭಾಸವಾಗುತ್ತಿದೆ” ಅನ್ನುತ್ತಾರೆ. ಎಲ್ಲರಿಗೂ ಅವರು ಇರುವೆರ್ ಬೈದ್ಯೆರ್ ಆಗಿ ಕಂಡರೆ ಬಲ್ಲಾಳರಿಗೆ ಮಾತ್ರ ಆಗಲೇ ಅವರಲ್ಲಿ ಬೆಮ್ಮೆರ್‌ರ ರೂಪ ಕಾಣುತ್ತದೆ. ಈ ಘಟನೆಯಲ್ಲಿ ಬೈದರ್ಕಳು ಬೆಮ್ಮೆರ್‌ರದೇ ಅವತಾರ ಎಂಬುದನ್ನು ಹೇಳಿಯೂ ಹೇಳದಂತೆ ಹೇಳಲಾಗಿದೆ. ಈಗ ಒಂದೆಡೆ ಜಯವುಲ್ಲ ಬೆಮ್ಮೆರ್ ಎಂದರೆ ಇನ್ನೊಂದೆಡೆ ಜಯಿಪುನ ಬೈದೆರ್ಲು ಎನ್ನುವುದು ಏಕೆ‌ ಎಂಬುದು ಅರ್ಥವಾಗುತ್ತಿದೆಯೇ?

https://prajnaanambrahmah.wordpress.com/
ಈಗ ಬೆಮ್ಮೆರ್ ಎಂದರೆ ಹಿರಿಯಜ್ಜನೋ, ಗತಕಾಲದ ಅರಸನೋ ಅಥವಾ ಸಾಮಾನ್ಯ ಭೂತವೋ ಎಂದೆಲ್ಲ ಹೇಳುವ ಸ್ವಘೋಷಿತ ಬುದ್ದಿವಂತರು ಮತ್ತೊಮ್ಮೆ ಆಲೋಚಿಸುವ ಅಗತ್ಯವಿದೆಯೇ ಇಲ್ಲವೇ? ಜಯವೆಂಬ ವೈಶಿಷ್ಟ್ಯಪೂರ್ಣ ಸಂಖ್ಯೆಯ ಕಾರಣಕ್ಕಾಗಿಯೇ ನಮ್ಮೀ‌ ಬ್ಲಾಗ್‌ನ ದೈವಾರಾಧನೆಯಲ್ಲಿ ಪೂರ್ಣತ್ವ ಎಂಬ ತೊಂಬತ್ತೊಂಬತ್ತನೇ ಲೇಖನವನ್ನು ಬೆಮ್ಮೆರ್‌ರಿಗೆ ಅರ್ಪಿಸಿದ್ದೆ. ಹೆಚ್ಚಿನ ಮಾಹಿತಿಗಾಗಿ ಈಗ ಅದನ್ನೊಮ್ಮೆ ಮತ್ತೆ ಓದಿ ನೋಡಿ. ಅದರ‌ ಮುಂದಿನ ಭಾಗದಲ್ಲಿ ಮತ್ತೆ ಈ ವಿಷಯವನ್ನು ಕೈಗೆತ್ತಿಕೊಳ್ಳೋಣ. ಅಂದಹಾಗೆ ಇಂದಿನ ಲೇಖನದ ಸಂಖ್ಯೆಯೂ ಅದೇ ಜಯವುಲ್ಲ ಬೆರ್ಮೆರ್‌ರದ್ದೇ ಆಗಿದ್ದು ಇದನ್ನೂ ಅವರಿಗೇ ಅರ್ಪಿಸೋಣ. ನಾಳೆ ಮತ್ತೆ ಎಣ್ಮೂರ ಬೈದೆರ್ಲು ಎಂಬ ವಿಷಯವನ್ನು ಕೈಗೆತ್ತಿಕೊಳ್ಳೋಣ.
|| ಬ್ರಹ್ಮಾರ್ಪಣಮಸ್ತು ||

PIC SOURCE harekrsna.com

Article Source https://prajnaanambrahmah.wordpress.com/


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »