ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದರೇನೆ ಹಾಗೆ ಜಗತ್ತಿಗೆ ಜೀವನ ಜ್ಞಾನದ ಬೆಳಕನ್ನು ತೊರಿದವರು.ಜಾತಿ ವ್ಯವಸ್ಥೆಯಲ್ಲಿನ ಮೇಲು-ಕೀಳೆಂಬ ಅಸಮಾನತೆಯ ಕತ್ತಲನ್ನು ಹೋಗಲಾಡಿಸಲು ಸಮಾನತೆಯ ತತ್ವ ದೀವಿಗೆಯ ಬೆಳಗಿದವರು .ಪ್ರತಿಯೊಬ್ಬರಿಗೂ ವಿಧ್ಯೆ ಸಿಗುವಂತಾಗಬೇಕು ಮತ್ತು ವಿಧ್ಯೆಯಿಂದ ಸ್ವತಂತ್ರರಾಗಬೇಕು ಎಂದು ಸಾರಿದವರು.ಒಟ್ಟುಗೂಡಿ ಬಾಲ್ವೇ,ಒಟ್ಟಾಗಿ ಕಾರ್ಯ, ಈ ಸಿದ್ದಾಂತಕ್ಕೆ ಪ್ರೇರಣೆ ನೀಡಿ,ಆಗ ಮಾತ್ರ ನಾವು ಬಲಯುತರಾಗಬಹುದು ಎಂಬ ಜೀವನ ತತ್ವವ ಬೋಧಿಸಿದವರು.
19 ನೇ ಶತಮಾನದಲ್ಲಿ ಕೇರಳ ಸಮಾಜವು ಜಾತಿ ವ್ಯವಸ್ಥೆಯನ್ನು ಭದ್ರವಾಗಿ ಪಾಲಿಸಿ ಪೋಷಿಸುತ್ತಿದ್ದ ಸಮಯದಲ್ಲಿ ಅದಕ್ಕೆ ಸವಾಲು ಹಾಕಿ,ಕೆಳ ವರ್ಗದ ಜನರನ್ನು ಸಮಾನತೆಗಾಗಿ ಜಾಗೃತಿಗೊಳಿಸಿದವರಲ್ಲಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳು ಅಗ್ರಗಣ್ಯರು.ಅಸ್ಪೃಶ್ಯರ ಪ್ರಗತಿಗೆ ಅಡ್ಡಿಯಾಗಿದ್ದ ಹಲವು
ಮೂಢನಂಬಿಕೆಗಳನ್ನು ಮೆಟ್ಟಿ ನಿಲ್ಲಬೇಕಾದ ಅಗತ್ಯವನ್ನು ಸಮಾಜದಲ್ಲಿ ಎತ್ತಿಹಿಡಿದವರು.ಸರಳ ವಿವಾಹವನ್ನು ಪ್ರೋತ್ಸಾಹಿಸಿದವರು. “ಮನುಷ್ಯನ ಧರ್ಮ ಯಾವುದೇ ಆಗಿರಲಿ,ಅವನು ಒಳ್ಳೆಯ ಮನುಷ್ಯನಾಗಬೇಕಾದದ್ದು ಮುಖ್ಯ” ಎಂದು ಸಾರಿದ ನಾರಾಯಣ ಗುರುಗಳು ವಿಶ್ವಮಾನ್ಯರು.
ನಾರಾಯಣ ಗುರುಗಳ ಹುಟ್ಟು ::
ಸಮಸ್ತ ಜನರ ಸುಖ-ಶಾಂತಿಗಳನ್ನು ಹಾಳುಗೆಡವಿ ಜಾತಿ ವ್ಯವಸ್ಥೆ ಎಂಬುದು ಮಾನಸಿಕವಾಗಿ ಜನರನ್ನು ಹಿಂಸಿಸುತ್ತಿದ್ದಾಗ,ಇದರಿಂದಾಗಿ ಸ್ವಾಮಿ ವಿವೇಕಾನಂದರು ಕೇರಳವನ್ನು ಇದೊಂದು ಹುಚ್ಚರ ಸಂತೆ ಎಂದು ಬೇಸರದಿಂದ ವ್ಯಾಖ್ಯಾನಿಸಿದಾಗ,ಜನರು ಮೇಲು ಜಾತಿ-ಕಿಳು ಜಾತಿ ಎಂದು ಬೇಧ ಭಾವ ಮಾಡುತ್ತಿದ್ದಾಗ ,ಶಿಕ್ಷಣ ವ್ಯವಸ್ಥೆಯು ಹದಗೆಟ್ಟಾಗ,1854ರ ಶ್ರವಣ ಮಾಸದ ಶತಭಿಷ ನಕ್ಷತ್ರದಲ್ಲಿ ತಿರುವನಂತಪುರದ ಚೆಂಬಳಾಂತಿ ಎಂಬ ಪುಟ್ಟ ಹಳ್ಳಿಯಲ್ಲಿ ಈಳವ ಕುಟುಂಬದ ಮಾಡನಾಶಾನ್ ಮತ್ತು ಕುಟ್ಟಿಯಮ್ಮ ದಂಪತಿಗಳಿಗೆ ಮಗನಾಗಿ ಹುಟ್ಟಿದರು, ಜಗತ್ತಿಗೆ ಬೆಳಕನ್ನು ಕೊಡುವ ಈ ಜಗತ್ಗುರು… ನಮ್ಮ “ನಾರಾಯಣ ಗುರು”ಗಳು.
ಗುರುಗಳ ಬಾಲ್ಯದ ಹೆಸರು ನಾಣು.ಊರಿನಲ್ಲೆಲ್ಲ ನಾಣು ಎಂದೇ ಪ್ರಸಿದ್ದಿಯಾಗಿದ್ದರು.ಸಂಪ್ರದಾಯಸ್ಥ,ಸದ್ಗುಣರರಾಗಿದ್ದ ಗುರುಗಳು ಒಳ್ಳೆಯ ಸಂಸ್ಕಾರದಲ್ಲಿ ಬೆಳೆಯತೊಡಗಿದರು.ದೇವರಿಗೆ ಬೇಕಾಗಿರುವುದು ನಿರ್ಮಲ ಅಂತಃಕರಣ ಮತ್ತು ಪರಿಶುದ್ಧ ಪ್ರೇಮ ಮಾತ್ರ ಹೊರತು ಬೇರೆನೂ ಅಲ್ಲಾ ಎಂದು ಬಾಲ್ಯದಲ್ಲಿರುವಾಗಲೆ ಎನ್ನುತ್ತಿದ್ದರು.ಕೆಳಜಾತಿಯವರನ್ನು ನೋಡುತ್ತಿದ್ದ ರೀತಿ,ಸಮಾಜದಲ್ಲಿ ಜನರು ಅನುಸರಿಸುತ್ತಿದ್ದ ಕುರುಡು ಮಡಿವಂತಿಕೆಯ ಅರ್ಥಹೀನತೆಯ ಅರಿವು ಗುರುಗಳಿಗೆ ಎಳವೆಯಲ್ಲೆ ಇತ್ತು.ಬೆಳೆಯುತ್ತಲೆ ಎಲ್ಲಾ ಗ್ರಂಥಗಳನ್ನು ಅಧ್ಯಯನ ಮಾಡಿದ ಗುರುಗಳು,ಸಂಸ್ಕೃತ,ಶಾಸ್ತ್ರಗಳನ್ನು ಗುರು ರಾಮನ್ ಪಿಳ್ಳೈ ಯವರಲ್ಲಿ ಕಲಿತರು ಮತ್ತು ಅದ್ವೈತ ಸಿದ್ಧಾಂತವನ್ನು ಬಲವಾಗಿ ನಂಬಲು ಗುರುಗಳ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರಮುಖರಲ್ಲಿ ಇವರು ಒಬ್ಬರು. ಎಲ್ಲವನ್ನೂ ಅಧ್ಯಯನ ಮಾಡಿ ಅರಿತ, ನಂತರ ಗುರುಗಳು ಅಧ್ಯಾಪನಾಗಿಯು ಸೇವೆ ಸಲ್ಲಿಸಿದರು,ನಂತರ ನಾಣು ಆಶಾನ್ ಎಂಬ ಹೆಸರಿನಿಂದ ಪ್ರಸಿದ್ಧರಾದರು.ಕಾಳಿಯಮ್ಮನೊಂದಿಗೆ ಮದುವೆಯನ್ನು ಮಾಡಿಕೊಂಡ ನಂತರ ಗುರುಗಳು ಎಲ್ಲ ಲೌಕಿಕ ಜೀವನವನ್ನು ಬಿಟ್ಟು ಪರಮಸತ್ಯದ ಶೋಧನೆಗಾಗಿ ವಿರಕ್ತ ಭಾವದಿಂದ ನಡೆಯುತ್ತ ದಕ್ಷಿಣ ದಿಕ್ಕಿನಡೆಗೆ ಸಾಗಿದರು. ಖಾವಿ ಬಟ್ಟೆಯನ್ನು ತೊಡದ ಇವರು ಸನ್ಯಾಸಿಯಾಗಿ ಊರಿಂದೂರಿಗೆ ಅಲೆದು ಸಮಾಜ ಸುಧಾರಣೆ ಮಾಡುತ್ತ ಸಾಗಿದರು.
ಸಾಮಾಜಿಕ ಸುಧಾರಣೆಯತ್ತ ಗುರುಗಳ ಚಿತ್ತ ::
ದೀನರ,ದಲಿತರ,ದುಃಖಿಗಳ,ರೋಗಿಗಳ,ಶೋಷಿತರ ಉದ್ಧಾರಕ್ಕಾಗಿ ತಮ್ಮ ಅತೀಂದ್ರಿಯ ಶಕ್ತಿಯನ್ನು ಮುಡಿಪಾಗಿಡಲು ನಿರ್ಧರಿಸಿದ ಗುರುಗಳು,ಅರುವಿಪ್ಪುರದಲ್ಲಿ ಶಿವ ದೇವಾಲಯ ನಿರ್ಮಿಸುವ ಉದ್ದೇಶದಿಂದ “ಶಂಕರ ಗುಂಡಿ” ಎಂಬ ಕೆರೆಯನ್ನು ನಿರ್ಮಿಸಿದರು. “ನಾನು ಮೇಲ್ಜಾತಿಯವರ ಶಿವನನ್ನು ಪ್ರತಿಷ್ಠಾಪಿಸಲಿಲ್ಲ,ಈಳವ ಶಿವನನ್ನು ಪ್ರತಿಷ್ಟಾಪಿಸಿದೆ” ಎಂದು ಹೇಳುತ್ತಲೆ ಶಿವನ ವಿಗ್ರಹವನ್ನು ಪ್ರತಿಷ್ಠಪಿದರು ಮತ್ತು ವಿಗ್ರಹಕ್ಕೆ ತನ್ನ ಆನಂದಭಾಷ್ಪವನ್ನು ಧಾರೆ ಎರೆದರು.ನಂತರ ಹಲವು ದೇವಾಲಯಗಳನ್ನು ಸ್ಥಾಪಿಸುತ್ತ ಬಂದ ಗುರುಗಳು,ಆಶ್ರಮವನ್ನು ಕೂಡ ಸ್ಥಾಪಿಸಿದರು.ಎಲ್ಲಾಕಡೆ ಸಂಚರಿಸಿದ ಗುರುಗಳು “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಸಂದೇಶವನ್ನು ಸಾರುತ್ತ ಹೋದರು. ಮನುಷ್ಯರು ಪ್ರಾಣಿಬಲಿ ಕೊಡುವುದನ್ನು ನಿಲ್ಲಿಸಿದರು,ಜನರಲ್ಲಿ ಎಲ್ಲಾದರ ಬಗ್ಗೆ ಜಾಗೃತಿ ಮೂಡಿಸಿದರು,ತೊಟ್ಟಿಲ ಮದುವೆ,ಬಾಲ್ಯ ವಿವಾಹ,ಬಹುಪತ್ನಿತ್ವ,ವರದಕ್ಷಿಣೆ, ದುಂದು ವೆಚ್ಚಾದ ಸಂಪ್ರದಾಯವನ್ನು ವಿರುದ್ಧ ಸಮರ ಸಾರಿದರು.ಮದ್ಯ ಕುಡಿಯುದರಿಂದ ಮಾನವ ಪಶುವಾಗುತ್ತಾನೆ,ಅದನ್ನು ಬಿಟ್ಟು ಗುಡಿಕೈಗಾರಿಕೆ,ಬೇಸಾಯ ಮೊದಲಾದ ಕೆಲಸಮಾಡಿ ಪರಿಶ್ರಮಿಗಳಾಗಿ ಬದುಕಿ ಎಂದು ಬೊಧಿಸಿದರು.ಅನಗತ್ಯ ಆಡಂಬರದಿಂದ ಬಡವರ ಮೇಲೆ ಒತ್ತಡ ಬೀಳಬಾರದೆನ್ನುವ ಉದ್ದೇಶದಿಂದ ದುಂದುವೆಚ್ಚವನ್ನು ನಿಲ್ಲಿಸಿದರು,ಸಮಾಜದಲ್ಲಿ ತಾಯಿಗೆ ಗೌರವಾನ್ವಿತ ಹಾಗೂ ಉತ್ತಮ ಸ್ಥಾನ ನೀಡಬೇಕು ಎಂದರು,ಮೂಡನಂಬಿಕೆಯಿಂದ ಮುಕ್ತವಾಗಬೇಕಾದರೆ,ಕುರುಡ ಆಚರಣೆಯನ್ನೆಲ್ಲ ನಿಲ್ಲಬೇಕಾದರೆ, ಶಿಕ್ಷಣವೊಂದೇ ಸರಿಯಾದ ಮಾರ್ಗ ಎಂದು ಎಲ್ಲರಿಗೂ ಶಿಕ್ಷಣ ಸಿಗಬೇಕೆಂದು ಶಾಲೆಗಳನ್ನು ಸ್ಥಾಪಿಸಿದರು.ಹೀಗೆ ಹಲವು ಕ್ರಾಂತಿಗಳನ್ನು ಮಾಡುತ್ತ ಸಾಮಾಜಿಕ ಸುಧಾರಣೆ ಮಾಡುತ್ತ ಸಾಗಿದರು.
ಗುರುಗಳ ಕೊನೆಯ ದಿನಗಳು ::
ಸಮಾಜದಲ್ಲಿ ಮೇಲು ಜಾತಿ ಕೀಳು ಜಾತಿ ಎಂಬ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಿದ ಗುರುಗಳು, “ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ” ಎಂಬ ಸಂದೇಶವನ್ನು ನೀಡುತ್ತ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಶ್ರಮಿಸಿದರು,ಎಲ್ಲಾ ಮೂಡನಂಬಿಕೆಯನ್ನು ಜನರಿಂದ ಹೊಗಲಾಡಿಸಬೇಕು,ಕುರುಡ ಆಚರಣೆ, ದುಂದು ವೆಚ್ಚವನ್ನು ತಡೆಯಬೇಕು ಎಂದು ಹೇಳುತ್ತ,ಸಮಾಜದಲ್ಲಿ ಎಲ್ಲರಿಗೂ ಸ್ಥಾನಮಾನ ಸಿಗಬೇಕು ಎಂದು ಗುರುಗಳು ಆಶಿಸಿದರು,ಅನೇಕ ಕಡೆ ಶಿವ ದೇವಾಲಯಗಳನ್ನು ನಿರ್ಮಿಸುತ್ತಾ,ನಮ್ಮ ಕಡಲ ತಡಿಯ ಪುಣ್ಯ ನೆಲ ಕುದ್ರೋಳಿಯಲ್ಲೂ ಗೋಕರ್ಣನಾಥೇಶ್ವರ ದೇವಾಲಯ ನಿರ್ಮಿಸಿ, ಎಲ್ಲರಿಗೂ ದೇವಾಲಯದ ಬಾಗಿಲು ತೆರೆದವರು,ಜಗತ್ತಿಗೆ ಜ್ಞಾನ ಬೆಳಕನ್ನು ಬೆಳಗಿದ ಗುರುಗಳು 1928 ಸಪ್ಟೆಂಬರ್ 28ರಂದು ತಾವು ನಿರ್ಮಿಸಿದ ಶಿವಗಿರಿ ಕ್ಷೇತ್ರದಲ್ಲಿ ಕಾಯ ಬಿಟ್ಟು ದೇವರಲ್ಲಿ ಲೀನರಾಗುತ್ತಾರೆ. ಇಂದಿಗೂ ಅಲ್ಲಿ ನಂದಾದೀಪವೊಂದು ಗುರುಗಳ ದ್ಯೋತಕವಾಗಿ ಬೆಳಗುತಿದೆ, ಗುರುಗಳ ಪಾದಕ್ಕೆ ಪೂಜೆ ಸಲ್ಲಿಕೆಯಾಗುತ್ತಿದೆ.
ಗುರುಗಳ ಮರಣದ ನಂತರದ ಬದಲಾವಣೆ::
ಶಿಕ್ಷಣ ವ್ಯವಸ್ಥೆಯೇ ಇಲ್ಲದ ಊರನ್ನು, ಮೇಲೆ-ಕಿಳು ಎನ್ನುತ ಬದುಕುತ್ತಿದ್ದ ಜನರ ಮಧ್ಯೆ, ಮೂಡನಂಬಿಕೆ,ಕುರುಡು ಆಚರಣೆ ಮಾಡುತ್ತ ಜೀವನ ಸಾಗಿಸುತ್ತಿದ್ದ ಜನರಲ್ಲಿ ಬದಲಾವಣೆಯ ಗಾಳಿಯನ್ನು ಬಿಸಿದ ಜಗತ್ತಿನ ವೈಚಾರಿಕತೆಯ ಬೆಳಕು,ನಮ್ಮ ನಾರಾಯಣ ಗುರುಗಳು. ದೇವಾಲಯದ ಓಳಗೆ ಪ್ರವೇಶ ಮಾಡಲು ಅವಕಾಶ ಇಲ್ಲಾದ್ದಿದಾಗ ದೇವಾಲಯವನ್ನು ನಿರ್ಮಿಸಿ,ಬಾಗಿಲು ತೆರೆದ ಸಂತ.ದೇವರ ದರ್ಶನಕ್ಕೆ ಬಾಗಿಲು ತೆರೆದು ಅವಕಾಶ ಕೊಟ್ಟ ಗುರುಗಳು ಪ್ರತಿಯೊಬ್ಬರ ಮನಸ್ಸಿನ ಬಾಗಿಲನ್ನು ತೆರೆದು,ಶಿಕ್ಷಣವಂತರು,ಗುಣವಂತರು,ಎಲ್ಲರೂ ಒಂದಾಗಿ, ಓಟ್ಟಿಗೆ ಅನೋನ್ಯತೆಯಿಂದ ಬಾಳುವಂತೆ ಮಾಡಿದರು.ಅವರ ತತ್ವಗಳು,ಸಂದೇಶಗಳು,ಅವರ ಸಾಮಾಜಿಕ ಸುಧಾರಣೆಗಳು ಇಂದಿಗೂ ನಮಗೆಲ್ಲರಿಗೂ ನಿರ್ದಶನವಾಗಿದೆ.
ಬರಹ: ರಾಜೇಶ್ ಎಸ್ ಬಲ್ಯ