ಜೀವನದಲ್ಲಿ ನಾವು ಅದೆನೇನೋ ಸಾಧಿಸಬೇಕು ಎಂಬ ಕನಸನ್ನು ಹೊತ್ತುಕೊಂಡು ಎದುರು ನೋಡುತ್ತಿರುತ್ತೇವೆ. ಅದೆಷ್ಟೇ ಕನಸು ಕಂಡರು, ಏನೇ ಮಾಡಿದರೂ, ಆ ಕನಸು ಈಡೇರಲು ನಮಗೆ ಯೋಗವೂ ಬೇಕು. ಭಾಗ್ಯವೂ ಬೇಕು. ಇದಕ್ಕಿಂತ ಹೆಚ್ಚಾಗಿ, ನಾವು ನಮ್ಮ ಸಾಧನೆಯನ್ನು ಎಷ್ಟು ಇಷ್ಟ ಪಡುತ್ತೇವೆ?, ನಮಗೆ ನಮ್ಮ ಮೇಲೆ ಎಷ್ಟು ನಂಬಿಕೆ ಇದೆ? ಮತ್ತು ಅದರ ಬಗೆಗೆ ನಾವು ಎಷ್ಟು ಪರಿಶ್ರಮ ಪಡುತ್ತೇವೆ? ಅನ್ನೋದು ಕೂಡ ತುಂಬಾ ಮುಖ್ಯವಾಗುತ್ತದೆ. ಹೀಗೆ ಗತ ಕಾಲದ ಪರಿಶ್ರಮ, ಅಚಲ ನಂಬಿಕೆ ಮತ್ತು ಧೈರ್ಯದಿಂದ ಸುಗಂಧ ಪುಷ್ಪವಾಗಿ ಎಲ್ಲೆಡೆಯೂ ಪರಿಮಳ ಬೀರುತ್ತಿರುವ ಅತ್ಯಮೂಲ್ಯವಾದ ಸಾಧಕ ಮೂಲ ಉಡುಪಿಯವರಾದ ಬೆಹ್ರೈನ್ ನಲ್ಲಿ ನೆಲೆಸಿರುವ ಶ್ರೀ ರಾಜ್ ಕುಮಾರ್ ಇವರ ಸಾಧನೆಯ ಕಥೆ ನಿಮ್ಮೆಲ್ಲರ ಜೊತೆ.
ಇವರು ಶ್ರೀ ಭಾಸ್ಕರ್ ಪಾಲನ್ ಮತ್ತು ಶ್ರೀಮತಿ ಸುಂದರಿ ಅಮೀನ್ ಇವರ ಮೊದಲನೇ ಪುತ್ರನಾಗಿ ಉಡುಪಿ ಜಿಲ್ಲೆಯ, ಅಂಬಲಪಾಡಿ ಎಂಬ ಊರಿನಲ್ಲಿ ಜನಿಸಿದರು. ಇವರಿಗೆ ಐದು ಸಹೋದರರು ಮತ್ತು ಒಬ್ಬಳು ಸಹೋದರಿ ಇದ್ದಾರೆ. ಇವರು ಡಾ|| ದಾಮೋದರ ಮುಲ್ಕಿ ಮಾಜಿ ಶಾಸಕರ ಸುಪುತ್ರಿ ಡಾ¶ ಚೇತನಾ ಇವರನ್ನು ವರಿಸಿದ್ದು, ಡಾ¶ ಚೇತನಾ ರಾಜ್ ಕುಮಾರ್ ಇವರು ವೈದ್ಯೆಯಾಗಿ ಜನರ ಸೇವಾ ಕಾರ್ಯದಲ್ಲಿ ನಿರತವಾಗಿದ್ದಾರೆ. ಇವರಿಬ್ಬರಿಗೆ ಒಬ್ಬಳೇ ಮುದ್ದಾದ ಮಗಳು ಆರ್ಯ ರಾಜ್ ಕುಮಾರ್. ಇವರು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ರಾಜ್ ಕುಮಾರ್ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಅಂಬಲಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಎಸ್ ವಿ ಎಸ್ ಟಿ ಹೈಸ್ಕೂಲ್ ಕಿದಿಯೂರಿನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಪೂರ್ಣಪ್ರಜ್ಞ ಕಾಲೇಜು ಉಡುಪಿಯಲ್ಲಿ ಮತ್ತು ಪದವಿ ಶಿಕ್ಷಣವನ್ನು ಮಿಲಾಗ್ರಿಸ್ ಕಾಲೇಜು ಕಲ್ಯಾಣ್ಪುರ್ ಇಲ್ಲಿ ಮುಗಿಸಿರುತ್ತಾರೆ. ಪ್ರಸ್ತುತ ಬೆಹ್ರೈನ್ ನಲ್ಲಿ ವೃತ್ತಿಯಲ್ಲಿ ಉದ್ಯಮಿಯಾಗಿ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಇವರ ತಂದೆ ಬೆಹ್ರೈನ್ ನಲ್ಲಿ ವೃತ್ತಿಯಲ್ಲಿ ಇದ್ದು, ತಾಯಿ ಗೃಹಿಣಿಯಾಗಿ ಇದ್ದರು. ರಾಜ್ ಕುಮಾರ್ ತನ್ನ ಕಲಿಕಾ ಚಟುವಟಿಕೆಗಳಲ್ಲಿ ಮುಂದಿದ್ದು, ಶಾಲಾ ಕಾಲೇಜುಗಳಲ್ಲಿ ನಾಯಕನಾಗಿ ಕೂಡ ಪಟ್ಟವನ್ನು ಅಲಂಕರಿಸಿ ಶಿಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇವರಿಗೆ ಬಾಲ್ಯದಿಂದಲೇ ಬಂದ ಈ ನಾಯಕತ್ವದ ಗುಣ ಇವರಿಗೆ ಮುಂದೆ ಯಶಸ್ಸನ್ನೇ ತಂದು ಕೊಟ್ಟಿದೆ. ಯಾರ ಹಂಗಿಲ್ಲದೆ ಸುಖೀ ಸಂಸಾರ ಸಾಗುತ್ತಿದ್ದ ಸಂದರ್ಭದಲ್ಲೇ ಬೆಹ್ರೈನ್ ನಲ್ಲಿ ವೃತ್ತಿಯಲ್ಲಿ ಇದ್ದ ತಂದೆ ಹೃದಯಾಘಾತದಿಂದ ನಿಧನರಾಗುತ್ತಾರೆ. ಅದಾವ ಮೋಡ ಕವಿದ ವಾತಾವರಣ ವಕ್ಕರಿಸಿತ್ತೋ ಏನೋ? ಇಡೀ ಮನೆಗೆ ಆಧಾರ ಸ್ತಂಭವಾಗಿದ್ದ ತಂದೆಯ ಮರಣ ಇವರ ಸಂಸಾರಕ್ಕೆ ಮುಳ್ಳಾಯಿತು. ಈಗ ಮನೆಯ ಜವಾಬ್ದಾರಿ ಮನೆಯ ಹಿರಿಯ ಮಗನಾದ ರಾಜ್ ಕುಮಾರ್ ಇವರ ಮೇಲೆಯೇ ಬಂದುಬಿಡುತ್ತದೆ. ಇನ್ನು ಜೀವನ ಇಷ್ಟೆ ಅನ್ನುವಷ್ಟರಲ್ಲಿ ತಂದೆಯ ಆಶಿರ್ವಾದ ಎಂಬಂತೆ ತಂದೆಯ ಕಂಪನಿಯಿಂದಲೇ ಇವರಿಗೆ ಕೆಲಸ ಹುಡುಕಿಕೊಂಡು ಬರುತ್ತದೆ. ಆಗ ಇವರು ಇಪ್ಪತ್ತರ ಹರೆಯ ಪದವಿ ಶಿಕ್ಷಣವನ್ನು ಪೂರೈಸುತ್ತಿದ್ದರು. ಜವಾಬ್ದಾರಿ ಇವರ ಹೆಗಲ ಮೇಲೆ ಇದ್ದ ಕಾರಣ ಕೂಡಲೇ ವೀಸಾ ಪಡೆದುಕೊಂಡು 1982ರಲ್ಲಿ ದೂರದ ಊರಿನ ಸುಡುವ ನೇಸರನತ್ತ ಪಯಣ ಬೆಳೆಸಿಯೇ ಬಿಡುತ್ತಾರೆ. ನಂತರ ಇವರು ಇವರ ಜೀವನದಲ್ಲಿ ಹಿಂದೆ ತಿರುಗಿ ನೋಡಿದ ಮಾತೇ ಇಲ್ಲ. ಯಾಕೆಂದರೆ, ಇವರ ಒಳ್ಳೆಯ ವ್ಯಕ್ತಿತ್ವ, ಸಮಾಜ ಸೇವಾ ಮನೋಭಾವ ಇವರನ್ನು ಎಲ್ಲೂ ಹಿಂದೆ ತಿರುಗಿ ನೋಡುವಂತೆ ಮಾಡಿಲ್ಲ.
(Copyrights owned by: billavaswarriors.com )
ಇವರು ಅರಬ್ ರಾಷ್ಟ್ರದಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಕನ್ನಡದ ಒಲವನ್ನು ತೋರಿಸಿ ಕನ್ನಡವನ್ನು ಅರಬ್ ರಾಷ್ಟ್ರದಲ್ಲಿ ಕೂಡ ಬೆಳೆಸುವ ಪ್ರಯತ್ನ ಮಾಡಿ ಬೆಳೆಸಿದ್ದಾರೆ. ಇದಕ್ಕಾಗಿ ಏಕಾಂಗಿಯಾಗಿ ಹೋರಾಟ ಮಾಡಿ ಕರ್ನಾಟಕ ಸರ್ಕಾರದಿಂದ ಎರಡು ಕೋಟಿ ಮಂಜೂರು ಮಾಡಿಸಿ ಅದರಲ್ಲಿ ಒಂದು ಕೋಟಿ ಸಿಕ್ಕಿದ್ದು, ಆ ಒಂದು ಕೋಟಿಯನ್ನು ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸಿ, ಯಶಸ್ವಿಯಾಗಿ ಕಟ್ಟಡ ನಿರ್ಮಾಣ ಮಾಡಿದ ಖುಷಿ ಮತ್ತು ಹೆಗ್ಗಳಿಕೆ ಇವರಿಗಿದೆ. ಒಬ್ಬ ಸಾಹಿತ್ಯಾಭಿಮಾನಿಯಾಗಿ ಕನ್ನಡಪರ ಹೋರಾಟಗಾರನಾಗಿ ಸುಮಾರು ಹತ್ತು ವರುಷಗಳ ಕಾಲ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡ ಸಂಸ್ಕೃತಿಯನ್ನು ಅರಬ್ ರಾಷ್ಟ್ರದಲ್ಲಿ ಪಸರಿಸುವ ಸಲುವಾಗಿ “ಕನ್ನಡ ಸಂಘ ಬೆಹ್ರೈನ್” ಮೂಲಕ ಎರಡು ಬಾರಿ ಎರಡೆರಡು ದಿನಗಳ ಎಸ್.ಎಲ್.ಭೈರಪ್ಪ ಹಾಗೂ ದೊಡ್ಡರಂಗೇಗೌಡ ಇವರ ಅಧ್ಯಕ್ಷತೆಯಲ್ಲಿ ಬೃಹತ್ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿ ಕನ್ನಡಿಗರ ಹೃದಯದಲ್ಲಿ ಮನೆ ಮಾಡಿಕೊಂಡಿದ್ದಾರೆ.
(Copyrights owned by: billavaswarriors.com )
ಪ್ರತಿ ಸಮ್ಮೇಳನದಲ್ಲಿ 120 ಕ್ಕೂ ಹೆಚ್ಚು ವಿಶೇಷ ಸಾಧಕ ಸಾಹಿತಿಗಳು, ಸಿನಿಮಾ ನಟರು, ಸಚಿವರು, ಸಂಗೀತಗಾರರು, ನೃತ್ಯ ತಂಡಗಳು ಮುಂತಾದವರನ್ನು ತನ್ನ ತಾಯ್ನಾಡಿನಿಂದ ಬರಮಾಡಿಸಿಕೊಂಡು ವಿವಿಧ ಸಂಸ್ಕೃತಿಯ ವೈಭವವನ್ನು ಹಂಚಿಕೊಂಡು ಗಮನಸೆಳೆಯುತ್ತಾರೆ. ಕನ್ನಡ ಸಂಘದ ಮುಖಾಂತರ 2013 ರಲ್ಲಿ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಎಂಬತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಕರೆಸಿಕೊಂಡು “ಆಳ್ವಾಸ್ ವಿಶ್ವ ನುಡಿಸಿರಿ”ಯನ್ನು ನಡೆಸಿ ವಿಶ್ವವೇ ಭಾರತೀಯರ ಸಂಸ್ಕೃತಿಯನ್ನು ನೋಡಿ ಖುಷಿ ಪಡುವಂತೆ ಮತ್ತು ಮಾತನಾಡುವಂತೆ ಮಾಡಿದ್ದಾರೆ. ಕೇವಲ ಇಷ್ಟೇ ಅಲ್ಲದೆ ಮಕ್ಕಳಿಗೆ ಟ್ಯೂಷನ್ ತರಗತಿಯ ಜೊತೆಗೆ ಕನ್ನಡ ತರಗತಿಯನ್ನು ನಡೆಸಿ ಕನ್ನಡದ ಭಾಷೆಯ ಪ್ರಾಮುಖ್ಯತೆಯನ್ನು ಮತ್ತು ಕನ್ನಡಿಗರ ನಿಲುವನ್ನು ಎಲ್ಲರಜೊತೆ ಹಂಚಿಕೊಂಡಿದ್ದಾರೆ.
(Copyrights owned by: billavaswarriors.com )
ಇವರು ಹಲವಾರು ಪ್ರಶಸ್ತಿ, ಬಿರುದುಗಳಿಗೆ ಭಾಜನರಾಗಿ ಕನ್ನಡ ಮತ್ತು ತುಳುವರ ನಾಡು ನೆಲದ ಕೀರ್ತಿಯನ್ನು ಆಕಾಶದೆತ್ತರಕ್ಕೆ ಚಿಮ್ಮಿಸಿದ್ದಾರೆ. ಇವರ ಸಾಧನೆಯ ಒಲವನ್ನು ಕಂಡು ಇವರಿಗೆ ಹಲವಾರು ಸಂಘ-ಸಂಸ್ಥೆಗಳ ಹಾಗೂ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಪುರಸ್ಕಾರಗಳು ದೇಶ-ವಿದೇಶಗಳಲ್ಲಿ ಇವರ ಮುಡಿಗೇರಿದೆ.
(Copyrights owned by: billavaswarriors.com )
*ಕುವೈಟ್ ನಲ್ಲಿ ಕುವೈಟ್ ನ ಭಾರತೀಯ ರಾಯಭಾರಿ ಗಣಪತಿ ಹಾಗೂ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಇವರಿಂದ ವಿಶ್ವಮಾನ್ಯರು ಪ್ರಶಸ್ತಿ.
*ಬೆಂಗಳೂರಿನಲ್ಲಿ ಸಾಧನ ಚೈತ್ರ ಪ್ರಶಸ್ತಿ.
*ಸಿಂಗಪೂರಿನಲ್ಲಿ ಕುವೆಂಪು ಕಲಾನಿಕೇತನ ಇವರಿಂದ ” ಕುವೆಂಪು ಪ್ರಶಸ್ತಿ”.
*ಆರ್ಯಭಟ ಸಾಂಸ್ಕೃತಿಕ ಸಂಘ ಇವರಿಂದ “ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ-2013”.
*ಕೋಲಾರದಲ್ಲಿ ಕನ್ನಡಿಗಾಭಿಮಾನಿಗಳಿಂದ “ಅಭಿಮಾನಿ ಕನ್ನಡಿಗ ಪ್ರಶಸ್ತಿ”.
*ಅಮೆರಿಕಾದ ಅಕ್ಕ ಸಮ್ಮೇಳನದಲ್ಲಿ ಸನ್ಮಾನ ಮತ್ತು ಪುರಸ್ಕಾರ.
*ಮುಂಬೈ ಬಂಟರ ಸಂಘದಿಂದ ಸನ್ಮಾನ ಮತ್ತು ಪುರಸ್ಕಾರ.
*ದೆಹಲಿ ಕನ್ನಡ ಸಂಘದಿಂದ ಸನ್ಮಾನ ಮತ್ತು ಪುರಸ್ಕಾರ.
*ವಾರಣಾಸಿ ಕನ್ನಡ ಸಂಘದಿಂದ ಸನ್ಮಾನ ಮತ್ತು ಪುರಸ್ಕಾರ.
*ವಾಪಿ ಗುಜರಾತ್ ಕನ್ನಡ ಸಂಘದಿಂದ ಸನ್ಮಾನ ಮತ್ತು ಪುರಸ್ಕಾರ.
*ಇಷ್ಟು ಅಲ್ಲದೆ, ಮುಂಬೈ, ಅಬುದಾಬಿ, ಮಸ್ಕತ್ ಮುಂತಾದ ಕಡೆ ಹಲವು ಪುರಸ್ಕಾರಗಳು ಸಂದಿವೆ.
ಕನ್ನಡ ಅಭಿಮಾನ ಮಾತ್ರವಲ್ಲದೆ ತನ್ನ ತವರೂರು ತನ್ನ ಕುಲದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಇವರು “ಬಿಲ್ಲವ ಸಮಾಜದ” ಸಂಘಟನೆಗಳಿಗೂ ಪ್ರಾಮುಖ್ಯತೆಯನ್ನು ನೀಡಿ, 2003 ರಲ್ಲಿ “ಬೆಹ್ರೈನ್ ಗುರು ಸೇವಾ ಸಮಿತಿ”ಯನ್ನು ಸ್ಥಾಪಿಸಿದರು. ಮುಂದೆ “ಬೆಹ್ರೈನ್ ಬಿಲ್ಲವಾಸ್” ಇದರ ಸ್ಥಾಪಕರಾಗಿ ಮತ್ತು ಇದರಲ್ಲಿ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಗಲ್ಫ್ ರಾಷ್ಟ್ರಗಳಾದ ಸೌದಿ ಅರೆಬಿಯಾ, ಕತ್ತಾರ್, ಯು.ಎ.ಇ., ಓಮನ್, ಕುವೈಟ್ ಹಾಗೂ ಬೆಹ್ರೈನ್ ಹೀಗೆ 6 ಕೊಲ್ಲಿ ರಾಷ್ಟ್ರಗಳ ಬಿಲ್ಲವ ಪ್ರತಿನಿಧಿಗಳನ್ನು ಕರೆಸಿ ಒಕ್ಕೂಟ ಸಂಘವನ್ನು ರಚಿಸಿ, ಬೆಹ್ರೈನ್ ನಲ್ಲಿ ಬೃಹತ್ ಸಮ್ಮೇಳನವನ್ನು ಕೂಡ 2008 ರಲ್ಲಿ ದಿ|| ದಾಮೋದರ ಸುವರ್ಣರವರ ವೇದಿಕೆಯಲ್ಲಿ ಅನೇಕ ಬಿಲ್ಲವ ಮುಖಂಡರನ್ನು, ಸಿನಿಮಾ ನಟರನ್ನು, ಬಿಲ್ಲವ ಕಲಾವಿದರನ್ನು, ಅನೇಕ ಗಣ್ಯರನ್ನು ತಾಯ್ನಾಡಿನಿಂದ ಆಹ್ವಾನಿಸಿ, “ಗಲ್ಫ್ ಬಿಲ್ಲವ ಒಕ್ಕೂಟ”ದ ಪ್ರಪ್ರಥಮ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವ ಇವರು ಬಿಲ್ಲವ ಸಮಾಜದ ಏಳಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಬಿಲ್ಲವ ಸಂಘದ ವತಿಯಿಂದ 25 ಅಂಧ ಸಂಗೀತ ಕಲಾವಿದರನ್ನು ಬೆಹ್ರೈನ್ ಗೆ ಕರೆಸಿ ಬೃಹತ್ ಕಾರ್ಯಕ್ರಮವನ್ನು ನಡೆಸಿ ಜನರಿಂದ ಸಹಬ್ಬಾಸ್ ಗಿರಿಯನ್ನು ಪಡೆದುಕೊಂಡಿದ್ದಾರೆ.
ಇವರ ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ಬಿಲ್ಲವ ಸಮಾಜದಿಂದ ಸಂದ ಸನ್ಮಾನ ಪುರಸ್ಕಾರಗಳು
*ಹುಟ್ಟೂರಿನ ಅಂಬಲಪಾಡಿನಲ್ಲಿ ದೇವಸ್ಥಾನದ ವತಿಯಿಂದ ಪುರಸ್ಕಾರ.
*ಯುವವಾಹಿನಿ ಉಡುಪಿ ಘಟಕದಿಂದ ಸನ್ಮಾನ.
*ಬನ್ನಂಜೆ ಬಿಲ್ಲವ ಸಂಘದಿಂದ ಸನ್ಮಾನ.
*ಬೆಂಗಳೂರು ಬಿಲ್ಲವ ಸಂಘದಿಂದ ಸನ್ಮಾನ.
*ದುಬೈ ಬಿಲ್ಲವ ಸಂಘದಿಂದ “ಬಿಲ್ಲವ ಸ್ಟಾರ್” ಎಂಬ ಬಿರುದು ಮತ್ತು ಪ್ರಶಸ್ತಿ ಪುರಸ್ಕಾರ.
ಹೀಗೆ ಇನ್ನು ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿರುವುದು ಖುಷಿಯ ವಿಚಾರ.
ಬೆಹ್ರೈನ್ ಬಿಲ್ಲವ ಸಂಘದ ಕಾರ್ಯಕ್ರಮದ ಮೂಲಕ ನಟ ಶಿವರಾಜ್ ಕುಮಾರ್ ರವರನ್ನು ಸನ್ಮಾನಿಸಿ “ಬಿಲ್ಲವ ಕಲಾರತ್ನ” ಎಂಬ ಬಿರುದನ್ನು ನೀಡಿರುವ ಹೆಗ್ಗಳಿಕೆ ಕೂಡ ಇವರದು.
ನಾರಾಯಣ ಗುರುಗಳ ತತ್ವಾದರ್ಶಗಳು ನಿತ್ಯ ಜೀವನದಲ್ಲಿ ಮೂಡಿಬರಬೇಕು ಎಂಬ ದಿಟ್ಟ ನಿಲುವನ್ನು ಹೊಂದಿರುವ ಇವರು ಮೂಲಭೂತ ಸೌಕರ್ಯಗಳಾದ, ಊಟ, ವಸತಿ, ಅಕ್ಷರಭ್ಯಾಸ, ಆರೋಗ್ಯ ಪ್ರತಿಯೊಬ್ಬನಿಗೂ ಲಭಿಸಬೇಕೆಂದು ಸಂಘಟನೆಯ ವತಿಯಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಸಂಕಷ್ಟಕ್ಕೀಡಾಗಿರುವವರಿಗೆ ಸಹಾಯ ಧನವನ್ನಿತ್ತು ಲಾಲನೆ, ಪಾಲನೆ ಮತ್ತು ಪೋಷಣೆ ಮಾಡುತ್ತಿರುವ ನಿಜವಾದ ನಾಯಕ. ಇವರ ಕನ್ನಡ ಸಂಘ ಹಾಗೂ ಬಿಲ್ಲವ ಸಮಾಜದ ಅಧ್ಯಕ್ಷತೆಯಲ್ಲಿ ಅದೆಷ್ಟೋ ಪ್ರತಿಭಾನ್ವಿತ ಯಕ್ಷಗಾನ ಕಲಾವಿದರು, ಸಂಗೀತ ದಿಗ್ಗಜರು, ನೃತ್ಯಗಾರರು, ರಾಜಕೀಯ ಮುಖಂಡರು, ಸಮಾಜ ಸೇವಾ ಕಾರ್ಯಕತರು, ವಾಗ್ಮಿಗಳು, ಪೂಜ್ಯ ಸ್ವಾಮೀಜಿಗಳು ಹೀಗೆ ಸಾಧನೆಗೈದವರನ್ನು ಪ್ರೋತ್ಸಾಹಿಸುವ ಹಾಗೂ ಗೌರವಿಸುವ ಸಲುವಾಗಿ ಕಿರಿಯರಿಂದ ಹಿರಿಯರವರೆಗೆ ತನ್ನ ತಾಯ್ನಾಡು, ದೇಶದ ಎಲ್ಲಾ ಕಡೆಯಿಂದ ಹಾಗೂ ಬೇರೆಬೇರೆ ದೇಶಗಳಿಂದ ಬೆಹ್ರೈನ್ ಗೆ ಸ್ವಾಗತಿಸಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ, ಸನ್ಮಾನಿಸಿದ ಖುಷಿ ಇವರದ್ದು. ಅದೆಷ್ಟೋ ಸಂಘ ಸಂಸ್ಥೆಗಳ ಏಳಿಗೆಗೆ ದಾನಗಳನ್ನು ಕೂಡ ನೀಡಿ ಬೆಳೆಸಿದವರು ಇವರು.
ಇವರು ಬೆಹ್ರೈನ್ ನ ಭಾರತೀಯ ದೂತವಾಸದ ಸಿ.ಸಿ.ಐ.ಎ.(COC Co-Ordination Committee Of Indian associations)ಯ ಸದಸ್ಯರಾಗಿ, ಅಸಹಾಯಕ ಭಾರತೀಯ ಸಹೃದಯಗಳಿಗೆ ಸಕಾಲದಲ್ಲಿ ಸೂಕ್ತವಾಗಿ ಸ್ಪಂದಿಸುವ ನೆಲೆಯಲ್ಲಿ ಭಾರತೀಯ ರಾಯಭಾರಿ ಕಛೇರಿ ಆಶ್ರಯದ ಐ.ಸಿ.ಆರ್.ಎಫ್. ( Indian Community Relief Fund)ನ ಸಕ್ರಿಯ ಸದಸ್ಯರಾಗಿ ತಮ್ಮ ನಿಸ್ವಾರ್ಥ ಸೇವೆಯ ಸೇವಕನಾಗಿ ತೊಡಗಿಸಿಕೊಂಡಿದ್ದಾರೆ.
“ಸೂರ್ಯನಂತೆ ಮಿಂಚುವ ಆಸೆ ಇದ್ದರೆ, ಮೊದಲು ಸೂರ್ಯನಂತೆ ಉರಿಯುವುದನ್ನು ಕಲಿಯಬೇಕು” ಎಂಬ “ಡಾ¶ ಎ ಪಿ ಜೆ ಅಬ್ದುಲ್ ಕಲಾಂ” ಅವರ ನಾಣ್ಣುಡಿಯಂತೆ ಬಹ್ರೈನ್ ನ ಸೂರ್ಯನ ತಾಪಮಾನಕ್ಕೆ ಉರಿದು ಕಷ್ಟದಿಂದ ಇಷ್ಟಪಟ್ಟು, ತನ್ನ ಮಾನವೀಯತೆಯಿಂದ ಸಾಧನೆಗಳ ಸಾಲು ಸಾಲು ಸುರಿಮಳೆಯಿಂದ ಭೂಮಿ ತಂಪಾಗಿಸಿ ಹೊಸ ಪೈರಿಗೆ ನಾಂದಿ ಹಾಡಿ ಎಲ್ಲೆಡೆಯೂ ಹಸಿರ ಉಸಿರನ್ನು ನೀಡಿದಂತೆ ಕಂಗೊಳಿಸುವ ಮಿನುಗುತಾರೆಯಾಗಿದ್ದಾರೆ. ಇವರ ಈ ಸಾಧನೆಯನ್ನು ನಾವು ಗುರುತಿಸಿರುವುದು ನಮಗೆ ಖುಷಿಯ ವಿಚಾರ. ಇವರ ಸಾಧನೆಯ ಹಾದಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಮತ್ತು ಇನ್ನಷ್ಟು ಪುರಸ್ಕಾರಗಳು ಅರಸಿ ಬರಲಿ. ದೇವರ ಆಶೀರ್ವಾದ ಸದಾ ಇರಲಿ ಎಂದು ಆಶಿಸೋಣ.
ನಮ್ಮ ಸಾಧಕರು ನಮ್ಮ ಹೆಮ್ಮೆ
✍️ ಸಾಯಿ ದೀಕ್ಷಿತ್ ಪುತ್ತೂರು
– ಬಿಲ್ಲವ ವಾರಿಯರ್ಸ್
(Copyrights owned by: billavaswarriors.com )