ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಬಿಲ್ಲವ ಬ್ರಿಗೇಡ್ 8 ಕ್ಷೇತ್ರಗಳಲ್ಲಿ ಒಂದು ತಿಂಗಳ ಕಾಲ ಸ್ಟಿಕ್ಕರ್ ಅಭಿಯಾನ ನಡೆಸಲಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಅವಿನಾಶ್ ಸುವರ್ಣ, “ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ 2020ರ ಡಿ.7ರಂದು ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಮಂಗಳೂರು ಅಂತರಾಷ್ಟ್ರೀಯ ನಿಲ್ದಾಣದವರೆಗೆ ಬೃಹತ್ ಬೈಕ್ ಜಾಥಾವನ್ನು ಹಮ್ಮಿಕೊಂಡಿತ್ತು. ಇದು ನಡೆದ ಮರುದಿನ ಕರ್ನಾಟಕ ವಿಧಾನಸಭೆಯಲ್ಲಿ ಮೂಡುಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು” ಎಂದು ತಿಳಿಸಿದ್ದಾರೆ.
“ಒಂದು ವರ್ಷ ಕಳೆದರೂ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಉತ್ತರ ಬಂದಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ತಿಂಗಳಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಮರುನಾಮಕರಣ ಪ್ರಸ್ತಾಪನೆಯನ್ನು ಅಂಗೀಕರಿಸಿ ತಕ್ಷಣ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡುವಂತೆ ಒತ್ತಾಯಿಸುತ್ತಿದ್ದೇವೆ” ಎಂದಿದ್ದಾರೆ.
“ಮುಂದಿನ ಒಂದು ತಿಂಗಳ ಕಾಲ ದ.ಕ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಸ್ಟಿಕ್ಕರ್ ಅಭಿಯಾನ ನಡೆಸಲಾಗುವುದು. ಈ ಅಭಿಯಾನ ಮುಗಿದ ಬಳಿಕ ಇದೇ ಬೇಡಿಕೆಯನ್ನು ಮುಂದಿಟ್ಟು ಬೃಹತ್ ಜನ ಸಮಾವೇಶ ನಡೆಸಲಾಗುವುದು” ಎಂದು ಹೇಳಿದ್ದಾರೆ.
ಈ ಸಂದರ್ಭ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸಾಲ್ಯಾನ್, ಕಿಶನ್ ಅಮೀನ್, ಪ್ರಶಾಂತ್, ಪವನ್ ಸಾಲ್ಯಾನ್ ಉಪಸ್ಥಿತರಿದ್ದರು.