ಕಾಪು : ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ಕಾಪು ಪೇಟೆಯಲ್ಲಿ ಹಾಲೆ ಮರದ ತೊಗಟೆಯಲ್ಲಿ ಸಿದ್ದ ಪಡಿಸಿದ ಕಷಾಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಆರ್. ಕೋಟ್ಯಾನ್ ಮಾತನಾಡಿ, ತುಳುನಾಡಿನ ಆಚರಣೆಗಳಲ್ಲೊಂದಾಗಿರುವ ಆಟಿದ ಅಮವಾಸ್ಯೆಯಂದು ಹಾಲೆ ಮರದಲ್ಲಿ ಸರ್ವ ರೋಗ ನಿವಾರಣೆ ಮಾಡುವ ಶಕ್ತಿ ಕಷಾಯಕ್ಕೆ ಇದೆ ಎಂಬ ನಂಬಿಕೆ ಇದೆ. ಇಂದಿನ ಆಧುನಿಕ ಯುಗದಲ್ಲಿ ಪೇಟೆ ಭಾಗದ ಜನರು ಆಟಿದ ಕಷಾಯದಿಂದ ವಂಚಿತರಾಗುವಂತಾಗಿದ್ದು ಪ್ರತೀ ಮನೆಗೂ ಕಷಾಯ ತಲುಪಿಸಬೇಕೆಂಬ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು 50 ಲೀಟರ್ ನಷ್ಟು ಹಾಲೆ ಮರದ ಕೆತ್ತೆಯ ಕಷಾಯವನ್ನು ಸಿದ್ಧ ಪಡಿಸಲಾಗಿದ್ದು, ಕಾಪು ಪೇಟೆಯಲ್ಲಿ ಸರ್ವ ಧರ್ಮಿಯರು ಸಹಿತ ನೂರಾರು ಮಂದಿ ಕಷಾಯ ಸ್ವೀಕರಿಸಿರು.
ರವಿವಾರ ಮುಂಜಾನೆ 3 ಗಂಟೆಗೆ ಎದ್ದು, ಇನ್ನಂಜೆ, ಮಡುಂಬು, ಕಾಪು ಮೊದಲಾದ ಕಡೆಗಳಲ್ಲಿ ಹಾಲೆ ಮರದ ಕೆತ್ತೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಆಟಿದ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ಕಾಪು ಪೇಟೆಯಲ್ಲಿ ನೂರಾರು ಮಂದಿ ನಾಗರಿಕರಿಗೆ ಉಚಿತವಾಗಿ ವಿತರಿಸುವ ಮೂಲಕ ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಸದಸ್ಯರು ಮಾದರಿಯಾಗಿದ್ದಾರೆ.
ಕಾಪು ಪುರಸಭೆಯ ನಿಕಟಪೂರ್ವ ಸದಸ್ಯೆ ಅಶ್ವಿನಿ , ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು, ಸದಸ್ಯರಾದ ಪ್ರಶಾಂತ್ ಪೂಜಾರಿ, ಸೃಜನ್ ಎಲ್. ಸುವರ್ಣ, ಮನೋಹರ್ ಕಲ್ಲುಗುಡ್ಡೆ, ಅತಿಥ್ ಸುವರ್ಣ ಪಾಲಮೆ, ಜೀವನ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ರೂಪೇಶ್, ದಾಮೋದರ್ ಕಾಪು ಮೊದಲಾದವರು ಉಪಸ್ಥಿತರಿದ್ದರು.