ಮಂಗಳೂರು: ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಿನ್ನೆ ಸಂಜೆ ಮೂಡಬಿದ್ರಿ ಬಳಿಯ ಗರಡಿಯಲ್ಲಿ ಕ್ಷಮೆ ಯಾಚನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿ ಮುಖಕ್ಕೆ ಮಸಿ ಬಳೆದವರಿಗೆ ಘೋಷಿಸಿದ್ದ 1 ಲಕ್ಷ ರೂ. ಬಹುಮಾನವನ್ನು ಸಮಾಜದ ಬಡ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವುದಾಗಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.
ಅಧಿಕಾರಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಪ್ರತಿಭಾ ಕುಳಾಯಿ ಅವರು ಪತ್ರಿಕಾಗೋಷ್ಠಿ ಕರೆದು ಅಧಿಕಾರಿ ಕೂಡಲೇ ಕೋಟಿ ಚೆನ್ನಯರ ಗರಡಿಯಲ್ಲಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದರು. ಬಳಿಕ ಫೇಸ್ಬುಕ್ ಲೈವ್ ನಲ್ಲಿಯೂ ಅಧಿಕಾರಿ ಮೂರು ದಿನಗಳ ಒಳಗೆ ಕ್ಷಮೆ ಯಾಚಿಸದಿದ್ದರೆ ಸಮುದಾಯದ ಯಾರಾದರೂ ಯುವಕರು ಅಧಿಕಾರಿ ಮುಖಕ್ಕೆ ಮಸಿ ಬಳಿಯಲು ಮುಂದೆ ಬಂದಲ್ಲಿ ಅವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿದ್ದರು. ಈ ಬಗ್ಗೆ ಮಾತಾಡಿದ ಪ್ರತಿಭಾ ಅವರು ಮುಂದಿನ ಮೂರು ದಿನಗಳ ಒಳಗಾಗಿ ಅಧಿಕಾರಿಯನ್ನು ಪಕ್ಷದಿಂದ ಉಚ್ಚಾಟಿಸದಿದ್ದಲ್ಲಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಪ್ರತಿಭಾ ಹೇಳಿದ್ದಾರೆ.