ಮಂಗಳೂರು: ತುಳುನಾಡು ಎಂದಕ್ಷಣ ಕಣ್ಣಿಗೆ ಕಾಣುವುದು ದೈವಾರಾಧನೆ. ತುಳುವರ ರಕ್ತದಲ್ಲಿ ದೈವಾರಾಧನೆ ಬೆರೆತು ಹೋಗಿದೆ. ಏನೇ ಕಷ್ಟ ಬಂದರು ಮೊರೆ ಹೋಗುವುದು ದೈವಗಳ ಕಾಲ ಬುಡಕ್ಕೆ. ನಂಬಿದವರನ್ನು ಯಾವತ್ತು ಕೈಬಿಟ್ಟವರಲ್ಲ ಈ ಅತಿಮಾನುಷ ಶಕ್ತಿಗಳಾದ ದೈವಗಳು. ಅದೆಷ್ಟೋ ಕಾಲದ ಹೊಡೆತಕ್ಕೆ ಮಣ್ಣಿನಡಿಗೆ ಸೇರಿದ ದೈವಸ್ಥಾನಗಳು ಕೂಡ ಕಾಲ ಬಂದಾಗ ತಮ್ಮ ಇರುವಿಕೆಯನ್ನು ತೋರಿಸಿ ತಮಗೆ ಬೇಕಾದ ಸ್ಥಾನಮಾನಗಳನ್ನು ಕಟ್ಟಿಸಿಕೊಂಡು ನಂಬಿದವರಿಗೆ ಇಂಬುಕೊಟ್ಟವರು.
ಇಂತಹ ದೈವಾರಾಧನೆಯಲ್ಲಿ ಗರಡಿಗಳು ಕೂಡ ಕಾಯ ಬಿಟ್ಟು ಮಾಯ ಸೇರಿದ ಅವಳಿ ಕಾರಣೀಕ ಪುರುಷರ ಆರಾಧನ ಕೇಂದ್ರ. ಪ್ರಸ್ಥುತ 250 ಮಿಕ್ಕಿ ಗರಡಿಗಳು ಇದ್ದರು ಕೂಡ ಕೆಲವು ಗರಡಿಗಳು ಮಣ್ಣಿನ ಅಡಿಯಲ್ಲಿ ಜೀರ್ಣಾವಸ್ಥೆಯಲ್ಲಿ ಇದೆ. ಹೆಸರಿಗೆ ಮಾತ್ರ ಲೆಕ್ಕದಲ್ಲಿ ಇದೆ. ಅಂತಹುದೇ ಗರಡಿಗಳಲ್ಲಿ ಮೈಂದಡಿ ಗರಡಿಯು ಒಂದು. ಶ್ರೀ ಕ್ಷೇತ್ರ ಕಟೀಲಿಗೆ ಹೋಗುವ ದಾರಿಯಲ್ಲಿ ಸಿಗುವ ನಿಡ್ಡೋಡಿ ಎಂಬ ಗ್ರಾಮದಲ್ಲಿ ಮೈಂದಡಿ ಎನ್ನುವ ಪುಟ್ಟ ಊರು. ಹಸಿರು ಕಾಂತಿಯಿಂದ ಈ ಹಳ್ಳಿ ಕಂಗೊಳಿಸುತ್ತಾ ಇದ್ದು ಎಲ್ಲರು ನೆಮ್ಮದಿಯಿಂದ ಒಟ್ಟಾಗಿ ಜೀವಿಸುತ್ತಿರುವ ಊರು. ಕಾಲದ ಹೊಡೆತಕ್ಕೆ ಸಿಕ್ಕಿ ಈ ಹಿಂದೆ ವಿಜೃಂಭಣೆಯಿಂದ ನಡೆಯುತ್ತಿದ್ದ ಗರಡಿ ಜಾತ್ರೆ ಕಾಲಗರ್ಭದಲ್ಲಿ ಹುದುಗಿ ಹೋಗಿದೆ. 66 ಗರಡಿ 33 ತಾವುಗಳೆಂಬ ನಾಣ್ಣುಡಿಯಂತೆ ಈ ಗರಡಿಯು ಕೂಡ 66 ಗರಡಿಯಲ್ಲಿ ಸೇರಿರಬಹುದೆಂಬ ನಂಬಿಕೆಯಿದೆ. ಇಲ್ಲಿ ಅಳಿದು ಉಳಿದಿರುವ ಶಕ್ತಿ ಕಲ್ಲು, ದಂಬೆ ಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಇವೆಲ್ಲ ಇದಕ್ಕೆ ಸಾಕ್ಷಿಯೆಂಬಂತೆ ಇದೆ. ಸುಮಾರು 150 ವರ್ಪಗಳ ಹಿಂದೆ ಬಹು ಸಡಗರದಿಂದ ನಡೆಯುತ್ತಿದ್ದ ನೇಮೋತ್ಸವವು ಯಾಕಾಗಿ ನಿಂತಿದೆ ಎನ್ನುವ ಮಾಹಿತಿ ಯಾರಿಗೂ ಇಲ್ಲ. ನೋಡಿದ ಕೇಳಿದ ಜನರು ಇರಲು ಸಾಧ್ಯವಿಲ್ಲ. ಆದರೆ 5 ಕಡೆಗಳಿಂದ ದೈವಗಳು ಮತ್ತು ಬೈದೇರುಗಳ ಭಂಡಾರ ಬಂದು ನೇಮೋತ್ಸವ ಆಗುತ್ತಿದ್ದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿಯಿದೆ. ಭಾವದ ಮನೆಯಿಂದ ಕೊಡಮಂದಾಯ ದೈವದ ಭಂಡಾರ, ಪಾತ್ರಬೈಲು ಮನೆಯಿಂದ ಸರಳ ಜುಮಾದಿ ಭಂಡಾರ, ಮಚ್ಚಾರು ಮನೆಯಿಂದ ಬೈದೇರುಗಳ ಭಂಡಾರ, ನಂದೊಟ್ಟು ಮನೆಯಿಂದ ಕಾಂತೇರ್ ಜುಮಾದಿ ಭಂಡಾರ ಮತ್ತು ಇನ್ನೊಂದು ಕಡೆಯಿಂದ ಜಾರಂದಾಯನ ಭಂಡಾರ ಮೈಂದಡಿ ಎನ್ನುವ ಸ್ಥಳದಲ್ಲಿ ಇರುವ ದೈವಸ್ಥಾನಕ್ಕೆ ಮತ್ತು ಗರಡಿಗೆ ಒಟ್ಟಾಗಿ ಬಂದು ಧ್ವಜಾರೋಹಣ ಆಗಿ ನೇಮೋತ್ಸವ ಆಗುತ್ತಿತ್ತಂತೆ. ಇಡೀ ಊರಿಗೆ ಇದು ಜಾತ್ರೆ. ಗ್ರಾಮಸ್ಥರು ಎಲ್ಲರು ಒಟ್ಟಾಗಿ ದೈವಗಳ ಮತ್ತು ಬೈದೇರುಗಳ ಭಂಡಾರ ಮನೆಯವರ ಮುಂದಾಳತ್ವದಲ್ಲಿ ನಡೆಸುತ್ತಿದ್ದರಂತೆ. ಆದರೆ ಯಾವುದೋ ಒಂದು ವಿಷ ಗಳಿಗೆಯಲ್ಲಿ ಎಲ್ಲವು ನಿಂತು ಹೋಗಿ ಮೈಂದಡಿಯಲ್ಲಿರುವ ದೈವಸ್ಥಾನ ಮತ್ತು ಗರಡಿ ಧರಶಾಹಿಯಾಗಿದೆ. ಈ ಬಗ್ಗೆ ಊರಿನ ಸಂಬಂಧಪಟ್ಟವರಿಂದ ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದ್ದು ಅತೀ ಬೇಗನೆ ಆಗಬಹುದೆಂಬ ನಂಬಿಕೆಯಿದೆ. ಒಂದಂತು ಸತ್ಯ ಯಾವ ಕಾಲಕ್ಕೆ ಯಾವುದು ಆಗಬೇಕೆನ್ನುವುದು ದೈವ ನಿರ್ಣಯ. ದೈವಗಳ ಮತ್ತು ಬೈದೇರುಗಳ ನಿರ್ಣಯ ಯಾವ ರೀತಿ ಇದೆಯೆಂಬುದು ಯಾರಿಗೂ ತಿಳಿದಿಲ್ಲ. ಆದರೆ ಆಗುತ್ತೆ ಎನ್ನುವುದು ಸಾರ್ವಕಾಲಿಕ ಸತ್ಯ. ಗ್ರಾಮಸ್ಥರೆಲ್ಲ ಈ ಬಗ್ಗೆ ಉತ್ಸುಕತೆಯಿಂದ ಕಾಯುತ್ತಿದ್ದು ಎಲ್ಲರು ಒಂದು ಕಡೆ ಸೇರಿ ಈ ಬಗ್ಗೆ ಚರ್ಚಿಸಲು ಮಾತ್ರ ಬಾಕಿಯಿರುತ್ತದೆ. ಇಲ್ಲಿನ ಪಳೆಯುಳಿಕೆಗಳಾದ ದೈವಗಳ ದೈವಸ್ಥಾನ, ಬೈದೇರುಗಳ ಗರಡಿ, ದಂಬೆಕಲ್ಲು, ಶಕ್ತಿಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಹೊರಗಿನಿಂದ ಅಲ್ಪಸ್ವಲ್ಪ ಕಾಣುತ್ತಿದ್ದು ಚಿತ್ರಣವನ್ನು ನೋಡುವಾಗ ಮೈ ರೋಮಾಂಚಣಗೊಳ್ಳುತ್ತದೆ. ಇಂದಿಗೂ ಅಲ್ಲಿರುವ ಶಕ್ತಿಗಳು ಭಕ್ತರ ಬರುವಿಕೆಗೆ ಕಾದಿದೆಯೋ ಎನ್ನುವಂತೆ ಭಾಸವಾಗುತ್ತಿದೆ.
Credits: ನಮ್ಮ ಬಿಲ್ಲವೆರ್