ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ “Champions of Justice” ಪ್ರಶಸ್ತಿಗಳನ್ನು ಪಡೆದಿರುವುದು ಅವರ ಅಪರೂಪದ ಸಾಧನೆಗಳಿಗೆ ಸಾಕ್ಷಿಯಾಗಿದೆ.
ಖಾಕಿ ಉಡುಪಿನೊಳಗೆ ದಕ್ಷ ಅಧಿಕಾರಿಯಷ್ಟೇ ಅಲ್ಲದೆ, ಒಬ್ಬ ಕಲಾವಿದ, ನಿರೂಪಕ ಹಾಗೂ ಕಲಾಪೋಷಕರಾಗಿಯೂ ಗುರುತಿಸಿಕೊಂಡಿರುವ ಅವರು ಸಮಾಜದ ಎಲ್ಲಾ ವರ್ಗದವರೊಂದಿಗೆ ಮಮತೆಯ ಬಂಧವನ್ನು ಬೆಳೆಸಿಕೊಂಡಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣವಾಗಿ, ಸಾಮಾನ್ಯ ಜನರೊಂದಿಗೆ ಮೃದುವಾಗಿ ವರ್ತಿಸುವ ಅವರ ಕಾರ್ಯವೈಖರಿ ಎಲ್ಲರ ಮನಸ್ಸಿನಲ್ಲಿ ಸಹೋದರತ್ವದ ಭಾವನೆಯನ್ನು ಮೂಡಿಸಿದೆ.
ಮಂಗಳೂರು ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸ್ಥಾಪನೆಗೆ ಮಹತ್ತರ ಪಾತ್ರ ವಹಿಸಿ, ತಮ್ಮ ದಕ್ಷ ಆಡಳಿತದಿಂದ ಪೊಲೀಸ್ ವ್ಯವಸ್ಥೆಯನ್ನು ಮಾದರಿಯಾಗಿ ರೂಪಿಸಿರುವುದು ಶ್ಲಾಘನೀಯ. ಮಹಾಭಾರತದಲ್ಲಿ ಶ್ರೀಕೃಷ್ಣನ ಜೊತೆ ಪಾಂಡವರು ಶಂಖ ಊದಿದಂತೆ, ಮಂಗಳೂರಿನಲ್ಲಿ ಶಾಂತಿಯ ಶಂಖವನ್ನು ಊದಿದ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಶ್ರೀ ಎಸ್. ಮಹೇಶ್ ಕುಮಾರ್ ಅವರು ಪ್ರಮುಖರು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
01-05-1972 ರಂದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ಕೆ. ಶಿವಪ್ಪ ದಂಪತಿಯವರ ಎರಡನೇ ಪುತ್ರರಾಗಿ ಜನಿಸಿದ ಅವರು, ಬಾಲ್ಯದಿಂದಲೇ ಶಿಕ್ಷಣದಲ್ಲಿ ಶ್ರೇಷ್ಠತೆ ತೋರಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕುಶಾಲನಗರದ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ, ನಂತರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೋಮೊಬೈಲ್ ಡಿಪ್ಲೋಮಾವನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು. ಅದೇ ಅವಧಿಯಲ್ಲಿ NCC ಸೇರಿ “C” ಪ್ರಮಾಣಪತ್ರವನ್ನು ಪಡೆದು ದೇಶಪ್ರೇಮ ಹಾಗೂ ಶಿಸ್ತನ್ನು ಮೈಗೂಡಿಸಿಕೊಂಡರು.
ನಂತರ ಮಂಡ್ಯ ಜಿಲ್ಲೆಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಪದವಿಯನ್ನು ಡಿಸ್ಟಿಂಕ್ಷನ್ನೊಂದಿಗೆ ಪೂರ್ಣಗೊಳಿಸಿ, ಸಮಾಜದ ಸರ್ವತೋಮುಖ ಏಳಿಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. “ಜಾಗೃತಿ ಯೂತ್ ಕ್ಲಬ್” ಸ್ಥಾಪನೆಯ ಮೂಲಕ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಮೊದಲಾದ ಅನೇಕ ಜನೋಪಯೋಗಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ ಯುವಜನತೆಯಲ್ಲಿ ಜಾಗೃತಿ ಮೂಡಿಸಿದರು.
1999ರಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಪಟ್ಟನಾಯಕನಹಳ್ಳಿ, ಕೊರಟಗೆರೆ, ತಿಪಟೂರು ಗ್ರಾಮೀಣ, ಗೌರಿಬಿದನೂರು ನಗರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಪ್ರಾಮಾಣಿಕತೆ, ಶೌರ್ಯ ಮತ್ತು ಜನಸ್ನೇಹಿ ಕಾರ್ಯವೈಖರಿಯಿಂದ ಜನಮನ ಗೆದ್ದರು.
2007ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಪದೋನ್ನತಿ ಹೊಂದಿ ಡಿಎಸ್ಬಿ ಬ್ರಾಂಚ್ ಮಂಡ್ಯ, ವಿಜಿಲೆನ್ಸ್ ಕೊರಟಗೆರೆ, ಮೈಸೂರು ರೂರಲ್ ಸರ್ಕಲ್, ಸಿರಾ ರೂರಲ್ ಸರ್ಕಲ್, ಚಿಕ್ಕಬಳ್ಳಾಪುರ ಸರ್ಕಲ್, ವಿಜಯಪುರ–ದೇವನಹಳ್ಳಿ ಹಾಗೂ ಇಂಟರ್ನ್ಯಾಷನಲ್ ಏರ್ಪೋರ್ಟ್ ದೇವನಹಳ್ಳಿಯಲ್ಲಿ ಸೇವೆ ಸಲ್ಲಿಸಿದರು.
ನಂತರ 2019ರಲ್ಲಿ ಡಿವೈಎಸ್ಪಿಯಾಗಿ ಪದೋನ್ನತಿ ಹೊಂದಿ ಇಂಟಲಿಜೆನ್ಸ್ ವಿಭಾಗ ಮಂಡ್ಯ, ಮಡಿಕೇರಿ ಹಾಗೂ ವಿರಾಜಪೇಟೆಗಳಲ್ಲಿ ಸೇವೆ ಸಲ್ಲಿಸಿದರು. ಬಳಿಕ ಎಸಿಪಿಯಾಗಿ ಮಂಗಳೂರು ನಾರ್ತ್ ವಿಭಾಗ – ಪಣಂಬೂರು ಹಾಗೂ ಮಂಗಳೂರು ಸೆಂಟ್ರಲ್ ವಿಭಾಗ – ಬಂದರು ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ವಿರಾಜಪೇಟೆಯಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ.
ಪಟ್ಟನಾಯಕನಹಳ್ಳಿಯಲ್ಲಿ ಸೇವೆ ಸಲ್ಲಿಸಿದ ವೇಳೆ ಸಾರ್ವಜನಿಕರು ಅವರ ವರ್ಗಾವಣೆಯನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನೆ ನಡೆಸಿ ವರ್ಗಾವಣೆಯನ್ನು ರದ್ದುಪಡಿಸಿದ್ದ ಘಟನೆ ಅವರ ಜನಪ್ರಿಯತೆಯ ಸಂಕೇತವಾಗಿದೆ.
ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರ ಹೋರಾಟ ನಡೆಸಿ ₹7 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದು, ಅನುಮಾನಾಸ್ಪದ ವಾಹನ ತಪಾಸಣೆ ವೇಳೆ ₹2.80 ಲಕ್ಷ ನಗದು ಹಣ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಹಾಗೂ ವಿರಾಜಪೇಟೆಯಲ್ಲಿ ನಿಷೇಧಿತ ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುವುದು ಅವರ ಕಾರ್ಯದಕ್ಷತೆಯನ್ನು ತೋರಿಸುತ್ತದೆ. ಈ ಕಾರ್ಯಗಳಿಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಪ್ರಶಂಸೆಯೂ ಲಭಿಸಿದೆ.
ಮಾದಕ ವಸ್ತು ಜಾಲ ಪತ್ತೆ, ಸಾಮಾಜಿಕ ಕೆಟ್ಟ ಪದ್ಧತಿಗಳ ನಿರ್ಮೂಲನೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು “ಸೂಪರ್ ಕಾಪ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಸಂತಸದ ವಿಷಯವಾಗಿದೆ.
ಅದರ ಜೊತೆಗೆ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ ಹಾಗೂ ಪಾವಗಡ ತಾಲ್ಲೂಕುಗಳಲ್ಲಿ ಆರ್ಯ ಈಡಿಗ ನೌಕರರ ಸಂಘ ಹಾಗೂ ಮಹಿಳಾ ಸಂಘಗಳನ್ನು ಸ್ಥಾಪಿಸಿ ಸಮುದಾಯದ ಸಂಘಟನೆ ಮತ್ತು ಸಬಲೀಕರಣಕ್ಕಾಗಿ ಶ್ರಮಿಸಿರುವುದು ಶ್ಲಾಘನೀಯ. ಪ್ರಸ್ತುತ ಕರ್ನಾಟಕ ರಾಜ್ಯ ಈಡಿಗ ನೌಕರರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಸಮುದಾಯದ ಹೆಮ್ಮೆಯಾಗಿದೆ.
ರಾಜ್ಯದ ಶ್ರೇಷ್ಠ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಶ್ರೀ ಎಸ್. ಮಹೇಶ್ ಕುಮಾರ್ ಅವರಿಗೆ ದೇವರು ಆರೋಗ್ಯ, ಆಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ.
ಕೊನೆಯಲ್ಲಿ,
“ನುಡಿದರೆ ಮುತ್ತಿನ ಹಾರದಂತಿರಬೇಕು, ಕಾರ್ಯ ಮಾಡಿದರೆ ಮಹೇಶ್ ಕುಮಾರ್ ರಂತೆ ಮಾಡಬೇಕು”
ಎಂಬ ಮಾತಿನಂತೆ ತಮ್ಮ ಸೇವೆಯನ್ನು ಮುಂದುವರಿಸಲಿ ಎಂದು ಆಶಿಸುತ್ತೇವೆ.
ನಿಮಗೆ ಶುಭವಾಗಲಿ… 🙏






