TOP STORIES:

FOLLOW US

ಬೆಮ್ಮೆರ್‌ರ ಎಡ-ಬಲದ ಜನಿವಾರಗಳು


ಬೆಮ್ಮೆರ್‌ರ ಪಾಡ್ದನದಲ್ಲಿ ಅವರ ಸ್ವರೂಪದ ಕಲ್ಪನೆಯನ್ನು ಗಮನಿಸಿದವರಿಗೆ ಕೌತುಕದ ಸಂಗತಿಯೊಂದು ಪ್ರಶ್ನೆಯಾಗಿ ಕಾಡುತ್ತದೆ. ಬೆಮ್ಮೆರ್ ತನ್ನ ಬಲ ಹೆಗಲಲ್ಲಿ ಬಂಗಾರದ ಜನಿವಾರ ಮತ್ತು ಎಡ ಹೆಗಲಲ್ಲಿ ಬೆಳ್ಳಿಯ ಜನಿವಾರ ಧರಿಸಿಕೊಂಡು ಉದ್ಭವವಾದರು ಎನ್ನುತ್ತದೆ ಪಾಡ್ದನ. ಸಾಮಾಜಿಕ ಮತ್ತು ಧಾರ್ಮಿಕ ಈ ಎರಡೂ ಹಿನ್ನೆಲೆಯಲ್ಲಿ ನೋಡಿದರೂ ಈ ಮಾತಿನ ಅಂತರಾಳವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಜನಿವಾರವನ್ನು ಎಡಹೆಗಲಿಂದ ಸೊಂಟದ ಬಲಭಾಗದತ್ತ ಬರುವಂತೆ ಧರಿಸುವುದು ಸಾವಿರಾರು ವರ್ಷಗಳಿಂದ ನಡೆದುಬಂದ ಪದ್ದತಿ. ಅದು ಬಿಟ್ಟು ಎರಡು ಹೆಗಲಲ್ಲಿ ಎರಡು ಜನಿವಾರ ಧರಿಸುವ ಪದ್ದತಿ ಯಾವುದೇ ಶಾಸ್ತ್ರದಲ್ಲಾಗಲಿ ಪುರಾಣಕಥೆಗಳಲ್ಲಾಗಲಿ ಕಂಡುಬರುವುದಿಲ್ಲ. ಅಂತಹದರಲ್ಲಿ ಸಾಮಾನ್ಯವಾಗಿ ಬ್ರಾಹ್ಮಣೇತರರ ಆರಾಧ್ಯದೈವವೆಂದೇ ಭಾವಿಸಲಾಗುವ ಬೆಮ್ಮೆರ್‌ರ ಪಾಡ್ದನದಲ್ಲಿ ಇಂತಹ ಉಲ್ಲೇಖ ಕಂಡಾಗ ಇದು ಶಾಸ್ತ್ರವನ್ನು ಅರಿಯದ ಜನಪದರು ತಮ್ಮ ಇಷ್ಟದೈವವನ್ನು ಬಣ್ಣಿಸುವಲ್ಲಿ ಬಳಸಿದ ಉತ್ಪ್ರೇಕ್ಷೆಯ ನುಡಿಯೆಂದೇ ಭಾಸವಾಗುವುದು ಸಹಜ. ತುಳುವ ಸಂಸ್ಕ್ರತಿಯಲ್ಲಿ ಆಳವಾಗಿ ಬೇರೂರಿರುವ ವೈದಿಕ ಮತ್ತು ವೇದಾಂತದ ಕಲ್ಪನೆಗಳ ಪೈಕಿ‌ ಕೆಲವನ್ನಾದರೂ ಎತ್ತಿ ತೋರಿಸುವಲ್ಲಿ ಈ ಬ್ಲಾಗ್ ಈವರೆಗೆ ಸಫಲವಾಗಿದೆ ಎಂದುಕೊಂಡಿದ್ದೇನೆ. ಉತ್ಪ್ರೇಕ್ಷೆಯಂತೆ ಕಾಣುವ ಈ ಜನಿವಾರಗಳ ಹಿಂದೆಯೂ ಯಾವುದೋ ಉನ್ನತ ವಿಚಾರ ಅಡಗಿರುವುದು ಖಂಡಿತ. ಮೊದಲಿಗೆ ಅದು ಉತ್ಪ್ರೇಕ್ಷೆಯಾಗಿರಬಹುದೇ ಎಂದು ನೋಡೋಣ. ಮನುಷ್ಯನ ಮಿತಿಯನ್ನು ದಾಟಿದ್ದು ಉತ್ಪ್ರೇಕ್ಷೆ ಎನಿಸಿಕೊಳ್ಳುತ್ತದೆ. ಭಗವಂತನ ವಿಚಾರದಲ್ಲಿ ಉತ್ಪ್ರೇಕ್ಷೆ ಎಂಬುದೇ ಇಲ್ಲ. ಯಾಕೆಂದರೆ ಆತನಿಗೆ ಮಿತಿಯಿಲ್ಲವಷ್ಟೇ? ಆತನ ವಿಚಾರದಲ್ಲಿ ಎಲ್ಲವೂ ಸತ್ಯವೇ. ಪರಸ್ಪರ ವಿರುದ್ಧವಾಗಿ ಕಾಣುವ ವಿಚಾರಗಳೂ ಆತನ ವಿಷಯದಲ್ಲಿ ಸತ್ಯವೇ ಆಗುತ್ತವೆ. ಉದಾಹರಣೆಗೆ “ಆತ ದೂರದಲ್ಲಿದ್ದಾನೆ, ಆದರೆ ಆತ ಹತ್ತಿರದಲ್ಲೂ ಇದ್ದಾನೆ. ಆತ ಎಲ್ಲದರ ಒಳಗಿದ್ದಾನೆ, ಆದರೆ ಎಲ್ಲದರ ಹೊರಗೂ ಇದ್ದಾನೆ” ಹೀಗೆ ಅತನನ್ನು ನಮ್ಮ ಹಿರಿಯರು ವರ್ಣಿಸಿದ್ದಾರೆ. ಎರಡೂ ಪರಸ್ಪರ ವಿರುದ್ದವಾದರೂ ಆತನ ವಿಷಯದಲ್ಲಿ ಮಾತ್ರ ಅದು ಸತ್ಯವೇ. ಹಾಗೆಯೇ ಬೆಮ್ಮೆರ್‌ರ ಜನಿವಾರದ ಕಲ್ಪನೆಯೂ ಯಾವುದೋ ಉನ್ನತ ವಿಚಾರವನ್ನು ಸಾರುವ ಉಪಮೆಯೇ ಹೊರತು ಸುಳ್ಳಾಗಲೀ ಉತ್ಪ್ರೇಕ್ಷೆಯಾಗಲೀ ಅಲ್ಲ. ಈ ವಿಚಾರದಲ್ಲಿ ಕೆಲ ಸಂಭವನೀಯ ಉತ್ತರಗಳನ್ನು‌ ನೋಡೋಣ ಬನ್ನಿ.

ಈ ಉತ್ತರಗಳ ಪೈಕಿ ಅತ್ಯಂತ ಸರಳವಾದ ಮತ್ತು ಈ‌ ಬ್ಲಾಗನ್ನು ತಪ್ಪದೆ ಅನುಸರಿಸುತ್ತಾ ಬಂದ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಉತ್ತರವೆಂದರೆ ಈ ಎರಡು ಜನಿವಾರಗಳು ಬೈದರ್ಕಳೇ ಹೊರತು ಬೇರಾರೂ ಅಲ್ಲ ಎಂಬುದು. ಬ್ರಹ್ಮನಾಡಿಯ ಎಡಬಲದಲ್ಲಿ ಇದ್ದುಕೊಂಡು ಬ್ರಹ್ಮನಾಡಿಯನ್ನು ಹಾವಿನಂತೆ ಹೆಣೆದುಕೊಂಡಿರುವ ಇಡಾ ಮತ್ತು ಪಿಂಗಳ‌ ನಾಡಿಗಳನ್ನೇ ಇಲ್ಲಿ ಬಂಗಾರ ಮತ್ತು ಬೆಳ್ಳಿಯ ಜನಿವಾರವಾಗಿ ಬಿಂಬಿಸಲಾಗಿದೆ. ಹಾಗಾಗಿಯೇ ಕೆಲವೆಡೆ ಬೈದರ್ಕಳಿಗೆ ಪ್ರತ್ಯೇಕ ವಿಗ್ರಹಗಳು ಇಲ್ಲದೆ ಅವರನ್ನು ಬೆಮ್ಮೆರ್‌ರ ವಿಗ್ರಹದಲ್ಲೇ ಸನ್ನಿಹಿತವಾಗಿರುವಂತೆ ಕಲ್ಪಿಸಿಕೊಂಡು ಆರಾಧಿಸಿಕೊಂಡು ಬರುವ ಪದ್ದತಿಯೂ ಇದೆ. ಈ ವಿಷಯವನ್ನು ಹಿಂದಿನ ಲೇಖನಗಳಲ್ಲಿ ವಿಷದವಾಗಿ ವರ್ಣಿಸಿರುವುದರಿಂದ ಇಲ್ಲಿ ಸಧ್ಯಕ್ಕೆ‌ ಇಷ್ಟು ಸಾಕು ಎನಿಸುತ್ತದೆ.

ಈಗ ಈ ಸರಳವಾದ ಉತ್ತರವನ್ನು ಬಿಟ್ಟು ಕ್ಲಿಷ್ಟವಾದ ಕೆಲ ವಿಚಾರಗಳತ್ತ ಗಮನ ಹರಿಸೋಣ. ಜನಿವಾರವನ್ನು ಎಡಹೆಗಲಿಂದ ಸೊಂಟದ ಬಲಭಾಗದತ್ತ ಹಾಕುವುದೇ ಲೋಕರೂಢಿ ಮತ್ತು ಶಾಸ್ತ್ರಸಮ್ಮತವೂ ಹೌದು. ಹಾಗೆಂದು ಜನಿವಾರವನ್ನು ಬಲಹೆಗಲಲ್ಲಿ ಹಾಕುವುದೇ ಇಲ್ಲವೇ? ಹಾಗೇನಿಲ್ಲ. ನಿತ್ಯದ ಅಶೌಚಕರ್ಮಗಳ ಹೊತ್ತಿಗೆ ಜನಿವಾರವನ್ನು ಎಡಕಿವಿಗೆ ಸಿಕ್ಕಿಸಿಕೊಳ್ಳುವುದಾದರೆ ವಿಶೇಷ ಅಶೌಚ ಕರ್ಮಗಳು ಅಂದರೆ ಪಿತೃಕಾರ್ಯಗಳಂತಹ ಸಂದರ್ಭದಲ್ಲಿ ಜನಿವಾರವನ್ನು ಬಲಹೆಗಲಿಗೆ ಹಾಕಿಕೊಳ್ಳುವುದು ಪದ್ದತಿ. ಆದರೆ ಬೆಮ್ಮೆರ್‌ರಿಗೆ ಪಿತೃಕಾರ್ಯಗಳಿವೆಯೇ? ಜಾತ- ಮೃತ ಶೌಚಗಳಿವೆಯೇ? ಅವರು ಶೌಚ- ಅಶೌಚಗಳನ್ನು ಮೀರಿದವರಲ್ಲವೇ? ಈ ಮೊದಲೇ ಹೇಳಿದ್ದೆ, ದೇವರ ವಿಚಾರದಲ್ಲಿ ಎಲ್ಲವೂ ಸತ್ಯವೇ. ಆತ ನಿತ್ಯ ಶುದ್ಧನೂ ಹೌದು, ನಿತ್ಯ ಅಶುದ್ಧನೂ ಹೌದು, ಶುದ್ಧಾಶುದ್ಧಗಳನ್ನು ಮೀರಿದವನೂ‌ ಹೌದು. ಈ ಪೈಕಿ ಆತ ನಿತ್ಯ ಶುದ್ಧನೆಂಬುದು ಮತ್ತು ಶುದ್ಧಾಶುದ್ಧಗಳನ್ನು ಮೀರಿದವನೆಂಬುದು ಎಲ್ಲರಿಗೂ ಅರ್ಥವಾಗುತ್ತದೆ, ಅದರಲ್ಲೇನೂ ಸಂಶಯವಿಲ್ಲ. ಆದರೆ ಆತ ನಿತ್ಯ-ಅಶುದ್ಧ ಹೇಗೆ? ನಮ್ಮ ತುಳುವರಲ್ಲಿ ಮಗುವೊಂದು ಜನಿಸಿದರೆ ಮಗುವಿನ ತಾಯಿ ಮತ್ತು ಆಕೆಯ ಕುಟುಂಬಕ್ಕೆ ಹದಿನಾರು ದಿನಗಳ ಅಶೌಚ (ಅಮೆ) ಇರುತ್ತದೆ. ಇನ್ನು ಮಗುವಿನ ತಂದೆಗೆ (ಅಳಿಯಕಟ್ಟಿನ ಪ್ರಕಾರ ಮಗು ಆತನ ಕುಟುಂಬ ಅಲ್ಲದಿದ್ದರೂ) ಮೂರು ಅಥವಾ ಐದು ದಿನಗಳ ಅಶೌಚವನ್ನು ಹೇಳಲಾಗಿದೆ. ಒಂದು ಸಾಮಾನ್ಯ ಮಗುವಿನ ಸಾಮಾನ್ಯ ತಂದೆಗೆ ಮೂರು‌ ದಿನದ ಅಶೌಚವಾದರೆ ಬೆಮ್ಮೆರ್‌ರ ಪಾಡನ್ನು ಊಹಿಸಿಕೊಳ್ಳಿ. ಜಗತ್ತಿನ ತಂದೆಯಾದ (ಅಥವಾ ತಾಯಿಯಾದ ಎಂದುಕೊಳ್ಳಿ) ಆತನಿಗೆ ದಿನವೂ ಅದೆಷ್ಟು ಮಕ್ಕಳು ಹುಟ್ಟುವುದಿಲ್ಲ ಅಥವಾ ಸಾಯುವುದಿಲ್ಲ? ಹಾಗಿರುವಾಗ ಆತನ ಅಶೌಚ ಮುಗಿಯುವುದೆಂದು? ಅದಕ್ಕೇ ಹೇಳಿದ್ದು, ಆತ‌ ನಿತ್ಯ ಶುದ್ಧನೂ ನಿತ್ಯ ಅಶುದ್ಧನೂ ಹೌದೆಂದು. ಹಾಗಿದ್ದರೆ ಆತನಿಗೆ ಎರಡು ಜನಿವಾರದ ಅಗತ್ಯವಿಲ್ಲವೇ?

ಇನ್ನು ಅತ್ಯಂತ ಜಟಿಲವಾದ ಮೂರನೇ ಉತ್ತರದತ್ತ ಸಾಗೋಣ. ಜನಿವಾರಗಳಲ್ಲಿ ಎರಡು ವಿಧವಿದೆ. ಒಂದು ಬ್ರಹ್ಮಚಾರಿಗಳು ಧರಿಸುವ ಮೂರೆಳೆಯ ಜನಿವಾರ, ಇನ್ನೊಂದು ಗೃಹಸ್ಥರು ಧರಿಸುವ ಆರೆಳೆಯ ಜನಿವಾರ. ಇಲ್ಲಿ‌ ಗೃಹಸ್ಥರು ಆರೆಳೆಯ ಜನಿವಾರ ಧರಿಸುವುದು ಅವರು ಬ್ರಹ್ಮಚಾರಿಗಳಿಗಿಂತ ಅಧಿಕರು ಎಂಬ ಕಾರಣಕ್ಕಾಗಿ ಅಲ್ಲ. ಗೃಹಸ್ಥ ಪುರುಷರು ತಾವು ಬ್ರಹ್ಮಚಾರಿಗಳಾಗಿದ್ದಾಗ ಧರಿಸುತ್ತಿದ್ದ ಮೂರೆಳೆ ಜನಿವಾರಕ್ಕೆ ವಿವಾಹಾನಂತರ ತಮ್ಮ ಪತ್ನಿಯ ಪರವಾಗಿ ಮೂರೆಳೆಯನ್ನು ಸೇರಿಸಿ ಆರೆಳೆಯ ಜನಿವಾರ ಧರಿಸುತ್ತಾರೆ. ಗೃಹಸ್ಥನೊಬ್ಬನ‌ ಜನಿವಾರವೆಂದರೆ ಆತನ ಮತ್ತು ಆತನ ಪತ್ನಿಯ ಜನಿವಾರ. ಹಿಂದೆ ಸ್ತ್ರೀಯರೂ ಉಪವೀತ ಧರಿಸಿ ಯಜ್ಞಾದಿ ಕರ್ಮಗಳಲ್ಲಿ ಭಾಗಿಯಾಗುತ್ತಿದ್ದದ್ದು ಮಾತ್ರವಲ್ಲದೆ ವೇದಾಂತವನ್ನು ಅರಗಿಸಿಕೊಂಡು ಆ ಬಗ್ಗೆ ಮುಕ್ತಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಕಂಡುಬರುತ್ತದೆ. ಇಷ್ಟಲ್ಲದೆ ವೇದಮಂತ್ರಗಳ ದೃಷ್ಟಾರರಾದ ಸ್ತ್ರೀಯರ ಉದಾಹರಣೆಗಳೂ ಇವೆ. ಸಹಜವಾಗಿಯೇ ಭಾವುಕರಾದ ಸ್ತ್ರೀಯರು ಧಾರ್ಮಿಕ‌ ವಿಚಾರಗಳಲ್ಲಿ ತಲ್ಲೀನರಾದರೆ ಸಂಸಾರಚಕ್ರ ಉರುಳುವುದು‌ ಕಷ್ಟಸಾಧ್ಯ ಎಂಬ ಕಾರಣಕ್ಕೆ ಮುಂದಕ್ಕೆ ಸ್ತ್ರೀಯರನ್ನು ಜನಿವಾರಧಾರಣೆ ಮತ್ತು ಪೂಜಾಕರ್ಮಗಳಿಂದ ಸ್ವಲ್ಪ‌ ದೂರವಿರಿಸಲಾಯಿತು. ಆಗ ಪತ್ನಿಯ ಪರವಾಗಿ ಆಕೆಯ ಜನಿವಾರವನ್ನು ಆಕೆಯ ಪತಿಯೇ ಧಾರಣೆ ಮಾಡಿಕೊಂಡು ಆಕೆಯ ಪಾಲಿನ ಅನುಷ್ಠಾನಗಳನ್ನು ತಾನೇ ನಿರ್ವಹಿಸುವ ಪದ್ದತಿ ಆರಂಭವಾಯಿತು. ದೇವತಾರಾಧನೆಯಲ್ಲಿ ವಿಷ್ಣುವಿಗೆ ವೈಷ್ಣವಿ ಇದ್ದಂತೆ ಅಥವಾ ಶಿವನಿಗೆ ಶಿವೆ ಇದ್ದಂತೆ, ಬೆಮ್ಮೆರ್‌ರಿಗೂ ಲೆಕ್ಕೇಸಿರಿ‌ ಎಂಬ ಸ್ತ್ರೀ‌ ಸ್ವರೂಪವಿದೆ. ಇಲ್ಲಿ ನಮಗೆ ತುಳುವ ಆರಾಧನಾ ಪರಂಪರೆಯ ಮತ್ತು ಅದರ ಹರಿಕಾರರಾದ ನಮ್ಮ ಹಿರಿಯರ ಬೌದ್ದಿಕ ಔನ್ನತ್ಯದ ಪರಿಚಯವಾಗುತ್ತದೆ. ದೇವತಾರಾಧನೆಯಲ್ಲಿ‌ ಹೆಚ್ಚಿನೆಡೆ ಆ ಜೋಡಿಯನ್ನು ಪತಿ-ಪತ್ನಿಯಾಗಿ ಪರಿಚಯಿಸಲಾಗಿದೆ. ಈ ಪತಿ-ಪತ್ನಿ ಸಂಬಂಧದ ಕಾರಣದಿಂದ ಕೆಲವೊಂದು ವೇದಾಂತದ ಗುಟ್ಟುಗಳು ಅನಾವರಣವಾಗದೇ ಉಳಿಯುವುದೂ ಇದೆ. ಆದರೆ ನಮ್ಮಲ್ಲಿ‌ ಹಾಗಾಗಿಲ್ಲ. ನಮ್ಮಲ್ಲಿ ಬೆಮ್ಮೆರ್ ಮತ್ತು ಲೆಕ್ಕೇಸಿರಿಯನ್ನು ಯಾವುದೇ ಸಂಬಂಧದ ಅಂಟಿನಿಂದ ಬಂಧಿಸಲಾಗಿಲ್ಲ. ಮುಂದಕ್ಕೆ ಬೆಮ್ಮೆರ್ ಮತ್ತು ಲೆಕ್ಕೇಸಿರಿ ಇತರ ದೈವಗಳ ರೂಪ ಪಡೆದಾಗಲೂ ಎಲ್ಲ ಕಡೆಯೂ ಅವರನ್ನು ಅಣ್ಣ-ತಂಗಿಯಾಗಿ ಬಿಂಬಿಸಲಾಗಿದೆಯೇ ಹೊರತು ಪತಿ-ಪತ್ನಿಯರಾಗಲ್ಲ. ನಮ್ಮಲ್ಲಿ ಉಳ್ಳಾಯ ಉಳ್ಳಾಳ್ತಿಯರಿಗೆ ಶಿವ-ಪಾರ್ವತಿಯರ ಸ್ವರೂಪವನ್ನು ಆರೋಪಿಸುವುದಾದರೂ ಅವರು ಬೆಳ್ಳಿಬೆಟ್ಟ ಇಳಿದು ಬರುವಾಗ ಅಣ್ಣ-ತಂಗಿಯರಾಗಿ‌ ಇಳಿದರು ಎನ್ನಲಾಗಿದೆ. ಬಹುಶ ಸಾರ್ವತ್ರಿಕವಾಗಿ ಆರಾಧಿಸಲ್ಪಡುವ ದೈವಗಳ ಪೈಕಿ ಮುಗೇರ ದೈವಗಳು ಮತ್ತು ಕುಕ್ಕೆತ್ತಿ‌-ಬಳ್ಳುವಿನಂತಹ ಅಪರೂಪದ ದೈವಗಳನ್ನು ಹೊರತುಪಡಿಸಿದರೆ ಪತಿ-ಪತ್ನಿ‌ ದೈವಗಳ ಉಲ್ಲೇಖವೇ ಕಂಡುಬರುವುದಿಲ್ಲ. ಇಲ್ಲಿ ಬಹಳ ಪ್ರಧಾನವಾದ ಅಂಶವೆಂದರೆ ಇಲ್ಲಿ ಸಂಬಂಧಗಳು ದೇಹಸಂಬಂಧವಾಗದೇ ಉಳಿಯುವುದರಿಂದ ಲೋಕಕ್ಕೇ ತಂದೆಯಾದರೂ ಬೆಮ್ಮೆರ್ ಕುಮಾರನಾಗಿಯೇ ಮತ್ತು ಲೋಕಕ್ಕೇ ತಾಯಿಯಾದರೂ ಲೆಕ್ಕೇಸಿರಿ‌ ಕನ್ಯೆಯಾಗಿಯೂ ಉಳಿಯಲು ಸಾಧ್ಯವಾಗಿದೆ. ಕೌಮಾರ್ಯ ಮತ್ತು ಕನ್ಯತ್ವಗಳು ದಾಂಪತ್ಯವಾಗಿ ಬದಲಾಗದೆ ಇರುವುದರಿಂದ ಇಲ್ಲಿ ಜನಿವಾರಗಳು ಒಂದಾಗುವ ಸಾಧ್ಯತೆಗಳಿಲ್ಲ. ಹಾಗಾಗಿ ಬೆಮ್ಮೆರ್ ಒಂದು‌ ಜನಿವಾರವನ್ನು ಬಲಕ್ಕೂ ಇನ್ನೊಂದನ್ನು ಎಡಕ್ಕೂ ಹಾಕುವ ಮೂಲಕ ಈ ಸೃಷ್ಟಿಗೆಲ್ಲಾ ತಂದೆಯೂ ನಾನೇ ತಾಯಿಯೂ ನಾನೇ ಎಂಬುದನ್ನು ಸೂಚ್ಯವಾಗಿ ಹೇಳುವಂತಿದೆ.© https://prajnaanambrahmah.wordpress.com

ಇನ್ನು ನಾಲ್ಕನೇ ಉತ್ತರದತ್ತ ಬರೋಣ. ಜನಿವಾರ ಅಥವಾ ಉಪವೀತ ಎಂದರೇನು? ಅದು ವೇದದ ಅಧ್ಯಯನ ಅಥವಾ ಜ್ಞಾನದ ಅರ್ಜನೆಯನ್ನು ಆರಂಭಿಸಿರುವ ಸಂಕೇತ. ವೇದಾಧ್ಯಯನ ಎಂದಾಗ ಕೆಲವೊಂದು ಧಾರ್ಮಿಕ ಸಾಹಿತ್ಯಗಳಲ್ಲಿ‌ ಮತ್ತು ತಮ್ಮನ್ನು ವಿದ್ವಾಂಸರು ‌ಎಂದು‌ ಭಾವಿಸಿರುವವರ ಮಾತಲ್ಲಿ ಆಗಾಗ ಕೇಳಿಬರುವ ವೇದಾಧಿಕಾರ ಎಂಬ ಮಾತು ನೆನಪಾಯಿತು. ಈ‌ ಬಗ್ಗೆ ಒಂದು‌ ಸಣ್ಣ ಸಮಜಾಯಿಶಿ ಕೊಟ್ಟು ಮುಂದುವರಿಯೋಣ. ವೇದವನ್ನು ಯಾರಾದರೂ ಅಧಿಕಾರ ಎಂದು ತಿಳಿದಿದ್ದಲ್ಲಿ ಆತ ಮೂರ್ಖನೇ ಸರಿ. ವೇದಾಧ್ಯಯನವೆಂಬುದು ಅಧಿಕಾರವಲ್ಲ, ಅದೊಂದು‌ ಕರ್ತವ್ಯ. ವೇದಗಳ ಬಗ್ಗೆ ಹಿಂದಿನವರು ಹೇಳಿಕೊಟ್ಟದ್ದನ್ನು ಅರ್ಥೈಸಿಕೊಳ್ಳುವುದು ಮಾತ್ರವಲ್ಲದೆ ತಾನು ಸ್ವಬುದ್ಧಿಯಿಂದ ಸ್ವಪ್ರಯತ್ನದಿಂದ ಅವರು ಹೇಳದ ವಿಷಯಗಳನ್ನೂ ಮನದಟ್ಟು ಮಾಡಿಕೊಳ್ಳುವುದು ಮತ್ತು ತಾನು ಅರ್ಜಿಸಿದ ಜ್ಞಾನ ತನ್ನೊಂದಿಗೆ ಕೊನೆಯಾಗದಂತೆ ಸೂಕ್ತ ಶಿಷ್ಯರನ್ನು ಹುಡುಕಿ ತನ್ನ ಜ್ಞಾನವನ್ನು ಅವರಿಗೆ ಧಾರೆಯೆರೆಯುವ ಮೂಲಕ ತನ್ನ ಸಾಧನೆ ಮುಂದಿನ ಪೀಳಿಗೆಗಳಿಗೂ‌ ಲಭ್ಯವಾಗುವಂತೆ ಮಾಡುವುದು ಪ್ರತಿಯೊಬ್ಬ ವೇದಾಧ್ಯಯನಕಾರನ ಹೊಣೆಗಾರಿಕೆ. ಹಾಗಾಗಿ ವೇದವೆಂಬುದು ಕರ್ತವ್ಯವೇ ಹೊರತು ಅಧಿಕಾರವಲ್ಲ. ಇನ್ನು ಮತ್ತೆ ಉಪನಯನದತ್ತ ಬರೋಣ.‌ಆವರೆಗೆ ಆಟವಾಡಿಕೊಂಡಿದ್ದ ಕುಮಾರನಿಗೆ ಮೊದಲ ಬಾರಿಗೆ ಉಪವೀತ ಧಾರಣೆ ಮಾಡಿಸಿ ವೇದಾಧ್ಯಯನದ ಸಾಂಕೇತಿಕವಾಗಿ ಗಾಯತ್ರೀ ಮಂತ್ರವನ್ನು ಬೋಧಿಸಿ ಆ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸುವುದು ವಾಡಿಕೆ. ಆದರೆ ಒಮ್ಮೆ ಜನಿವಾರ ಧಾರಣೆ ಮಾಡಿದರೆ ಸಾಕೇ? ಇಲ್ಲ, ಪ್ರತೀವರ್ಷ ಅವರವರ ಪರಂಪರೆಯ ಪ್ರಕಾರ ನಿರ್ದಿಷ್ಟ ದಿನದಂದು ಆ ಜನಿವಾರವನ್ನು ಬದಲಾಯಿಸುವುದು ಅಗತ್ಯ. ಇದು ಈ ವರೆಗೆ ಒಂದು ಮಟ್ಟದ ಜ್ಞಾನವನ್ನು ಅರ್ಜಿಸಿದ್ದರೂ ಮುಂದಿನ ವರ್ಷದಲ್ಲಿ ಹೊಸದಾದ ಜ್ಞಾನವನ್ನು ಅರ್ಜಿಸುವ ಇಚ್ಚೆಯ ಪ್ರತೀಕ. ಇದು ಅಂದಿಗೆ ಇಂದಿಗೆ ಮಾತ್ರವಲ್ಲ, ಸರ್ವಕಾಲಕ್ಕೂ ಅನ್ವಯಿಸುವ ಸತ್ಯ. ಜ್ಞಾನವು ನಿತ್ಯನೂತನ. ಇಂದಿರುವ ಜ್ಞಾನ ನಾಳೆಗೆ ಹಳೆಯದಾಗುತ್ತದೆ ಮಾತ್ರವಲ್ಲ ಅಜ್ಞಾನವೆಂದೂ ಕಂಡುಬರಬಹುದು. ಹಾಗಾಗಿ ಇಂದಿನ ನಮ್ಮ ಜ್ಞಾನವೇ ಶಾಶ್ವತವೆಂದಾಗಲೀ ಅಥವಾ ಇಂದು ಕಲಿತು ಮುಗಿಸಿ ಆರಾಮಾಗಿ ಕುಳಿತುಬಿಡಬಹುದೆಂದು ನಂಬುವುದು ಮೂರ್ಖತನವಾಗುತ್ತದೆ. ಉದಾಹರಣೆಗೆ ನಮ್ಮ ತಾತ-ಮುತ್ತಾತರ ಕಾಲದಲ್ಲಿ ದೂರದರ್ಶನವೆಂಬುದು ಕನಸಿನ ಮಾತಾಗಿತ್ತು. ಅದೇ ನಮ್ಮ ತಂದೆ ತಾಯಿಯರ ಕಾಲದಲ್ಲಿ ದೂರದರ್ಶನ ಸತ್ಯವಾಯಿತು. ಇಂದು ನಮ್ಮ ಕಾಲದಲ್ಲಿ ಅಂತರ್ಜಾಲವೆಂಬುದು ಹೊಸ ಸತ್ಯವಾಗಿದೆ. ಈಗ ನೋಡಿ, ಅಜ್ಜ ಅಜ್ಜಿಯರಿಗೆ ಟಿವಿ ಚಲಾಯಿಸುವುದೆಂದರೆ ಬಲು‌ದೊಡ್ಡ ಸಾಹಸ. ಆದರೆ ನಮ್ಮ ತಾಯ್ತಂದೆಯರು ಟಿವಿ ಚಲಾಯಿಸಬಲ್ಲರು, ಆದರೆ ಅಂತರ್ಜಾಲವನ್ನು ಜಾಲಾಡಲು ಅವರು ತಿಣುಕಾಡಬೇಕಾಗುತ್ತದೆ. ನಾವಿಂದು ನಮ್ಮನ್ನು ಅಂತರ್ಜಾಲದ ದೊರೆಗಳೆಂದು ಭಾವಿಸಿದ್ದೇವೆ. ಆದರೆ ಮುಂದೆ ಬರುವ ಹೊಸ ತಂತ್ರಜ್ಞಾನ ನಮಗೂ ಅದೇ ರೀತಿಯ ತಿಣುಕಾಟದ ರುಚಿ ತೋರಿಸುವುದು‌ ಖಂಡಿತ. ಈ ರೀತಿಯ ಸಮಸ್ಯೆ ಬಾರದಿರಬೇಕಾದರೆ ದಾರಿ ಒಂದೇ. ದಿನವೂ‌‌ ಹೊಸತನ್ನು ಕಲಿಯುತ್ತಲೇ ಇರಬೇಕು. ನಿಂತ ನೀರಾದಲ್ಲಿ ಕೆಡುವುದು ಖಂಡಿತಾ. ಈ ಸತ್ಯವನ್ನೇ ಬೆಮ್ಮೆರ್‌ರ ಎರಡು ಜನಿವಾರಗಳು ಸೂಚಿಸುತ್ತಿರಬಹುದು. ಒಂದು ಇಂದು‌ ನಡೆಯುತ್ತಿರುವ /ನಡೆಸಬೇಕಾದ ಜ್ಞಾನಾರ್ಜನೆಯ ಸಂಕೇತವಾದ ಬೆಳ್ಳಿಯ ಜನಿವಾರ. ಇನ್ನೊಂದು ಈಗಾಗಲೇ ಅರ್ಜಿಸಿರುವ ಜ್ಞಾನದ ಸಂಕೇತವಾಗಿ ಮೌಲ್ಯಯುತವಾದ ಬಂಗಾರದ ಜನಿವಾರ. ಬಂಗಾರದ್ದು ಇದೆಯೆಂಬ ಕಾರಣಕ್ಕೆ ಬೆಳ್ಳಿಯದ್ದನ್ನು ಬಿಟ್ಟು ಕೂರಬಾರದು ಎಂಬುದನ್ನು ಸೂಚಿಸಲು ಈ ಎರಡು ಜನಿವಾರಗಳು‌ ಬಳಕೆಯಾಗಿರುವ ಸಾಧ್ಯತೆಯಿದೆ.

“ಸತ್ಯಂ ಜ್ಞಾನಂ ಅನಂತಂ ಬ್ರಹ್ಮ” – ತೈತ್ತಿರೀಯ ಉಪನಿಷತ್

Post Credit https://prajnaanambrahmah.wordpress.com 

Author Venkatesh Karkera

Image Credit Bermer idol at Bommara bettu Garadi, Udupi District (source: Vamana Nandavara,2001)


Share:

More Posts

Category

Send Us A Message

Related Posts

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »

ಉಜಿರೆ ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ


Share       ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್  & ಬೈಟ್ ಐಟಿ ಕಂಪನಿಯ ಶ್ರೀ ಪ್ರಕಾಶ್ ರಾವ್ ಇವರು ನೀಡಿದ ಒಂದು ಲಕ್ಷ ಅರವತ್ತೈದು ಸಾವಿರ


Read More »