ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ.
ರಷ್ಯಾದ ಮಾಸ್ಕೋದಲ್ಲಿ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾಜ ಸೇವಾ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರತಿಭಾ ಕುಳಾಯಿ ಮಹಿಳೆಯರ ಸ್ವಾವಲಂಬಿ ಬದುಕು ರೂಪಿಸಲು ಮಾಡಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಹಣಕಾಸು ಸೌಲಭ್ಯ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು ನೆರವು, ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ ನೀಡುತ್ತಿದ್ದಾರೆ.
ಇದುವರೆಗೆ ಸಾವಿರಾರು ಮಹಿಳೆ ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡಿದ್ದಾರೆ.
ಸುರತ್ಕಲ್ ಕಾನ, ಬಾಳ ಪ್ರದೇಶದಲ್ಲಿರುವ ಮಂಗಳ ಮುಖಿಯರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯೊಂದಿಗೆ ಸೇರಿ ಶಾಶ್ವತ ಪುನರ್ವಸತಿಗೆ ಯೋಜನೆ ರೂಪಿಸಿದ್ದಾರೆ.
ಪ್ರತಿಭಾವಂತ ಪ್ರತಿಭಾ:
ಉನ್ನತ ಶಿಕ್ಷಣ: ಮಂಗಳೂರು ವಿವಿಯಿಂದ ಎಂ ಎಸ್ ಡಬ್ಸ್ಲುಉ ಪದವಿ, ತಮಿಳುನಾಡು ಸೇಲಂ ವಿವಿ ಯಿಂದ ಸೋಶೀಯಲ್ ವರ್ಕ್ ಗಾಗಿ ಎಂಫಿಲ್ ಪದವಿ. ಮೈಸೂರು ವಿವಿಯಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದಿದ್ದಾರೆ.
ಕಾಲೇಜು ಉಪನ್ಯಾಸಕಿಯಾಗಿ ಕೆಲಸ ಮಾಡಿದ ಪ್ರತಿಭಾ, ಶಿಕ್ಷಣ ಸಂಸ್ಥೆಗಳಲ್ಲಿ ಮನೋವಿಕಸನ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಸಂಸ್ಥೆಗಳಲ್ಲಿ ವೃತ್ತಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಆಗಿ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದವರು. ಅತಿ ಹೆಚ್ಚು ಅನುದಾನ ಬಳಸಿ ಅಭಿವೃದ್ಧಿ ಕಾಮಗಾರಿ ನಡೆಸಿ ದಾಖಲೆ ಬರೆದವರು
*ಅಲಂಕಾರಿಕಾ ಮೀನುಸಾಕಣೆ ಕೇಂದ್ರ ನಿವರ್ವಹಿಸಿ ೨೦೧೧ರಲ್ಲಿ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಕೃಷಿ ಮಹಿಳೆ ರಾಷ್ಟ್ರೀಯ ಪ್ರಶಸ್ತಿ ಗಳಿಸಿದವರು.
ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಹಿನ್ನೆಲೆಯಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ ಅನುಭವ ಧಾರೆ ಎರೆಯುತ್ತಿದ್ದಾರೆ.
ಕೊರೊನಾ ಕಾಲದಲ್ಲಿ ಲಾಕ್‌ಡೌನ್ ಸಂದರ್ಭ ಪ್ರತಿ ದಿನ ೪೦೦ಕ್ಕೂ ಹೆಚ್ಚು ಮಂದಿಗೆ ಸ್ವತಃ ಊಟ ತಯಾರಿಸಿ ನಿರಾಶ್ರತಿರಿಗೆ ಹಗಲು ರಾತ್ರಿ ಊಟದ ಪ್ಯಾಕ್ ವಿತರಿಸಿದವರು.
ಸಮಾಜ ಸೇವೆಯ ನಡುವೆ ಮೀನು ಕೃಷಿ,. ಬೇಸಾಯ, ಹಣ್ಣು ತರಕಾರಿ ತೋಟ ಕೂಡಾ ಮಾಡಿದ್ದಾರೆ. ಕಾರ್ಕಳ, ಕುಂದಾಪುರದಲ್ಲಿ ಕೃಷಿ ತಜ್ಞರೇ ಬೆರಗು ಪಡುವಂತಹ ಹಣ್ಣು ತರಕಾರಿ, ಅಡಕೆ ತೋಟ ಮಾಡಿದ್ದಾರೆ.
ಪ್ರತಿಷ್ಠಿತ ಗುರ್ಕಾರ ಮನೆತನದಲ್ಲಿ ಜನಿಸಿದ ಪ್ರತಿಭಾ ಕುಳಾಯಿ ಅವರ ಅಜ್ಜ ಶಿನಪ್ಪ ಮಾಸ್ಟರ್ ಶಿಕ್ಷಕರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸ್ಥಾಪಕಾಧ್ಯಕ್ಷ ಶೀನಪ್ಪ ಮಾಸ್ಟರ್ ಅವರ ಮಗ ಪ್ರಭಾಕರ ಕುಳಾಯಿ ಕೂಡಾ ಅದೇ ಹಾದಿಯಲ್ಲಿ ನಡೆದರು. ಮಾಸ್ಟ್ರ ಮೊಮ್ಮಗಳಾಗಿ ಸಮಾಜ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ದೀನ ದಲಿತರಿಗೆ ನೆರವಾಗುತ್ತಿದ್ದಾರೆ.