TOP STORIES:

ಜೂನ್ 15, ತುಳು ಚಿತ್ರರಂಗದಲ್ಲಿ ದಾಖಲೆಯ ಇತಿಹಾಸವನ್ನು ಬರೆದ ಕೋಟಿ ಚೆನ್ನಯ ಸಿನೆಮಾ ಬಿಡುಗಡೆಯಾಗಿ ನಲ್ವತ್ತ ಎಂಟು ವರ್ಷಗಳು ಸಂದಿವೆ


ಜೂನ್ 15, 1973 ರಲ್ಲಿ ಮಂಗಳೂರಿನ ಜ್ಯೋತಿ ಥಿಯೇಟರ್‌ ನಲ್ಲಿ ಬಿಡುಗಡೆಯಾದ ʼಕೋಟಿ ಚೆನ್ನಯʼ ಸಿನೇಮಾ ೧೨೪ ದಿನಗಳ ಕಾಲ ದಾಖಲೆಯ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು. ಮಿನುಗು ತಾರೆ ಕಲ್ಪನಾ ಅಭಿನಯದ ಈ ಚಿತ್ರದ ಕೋಟಿ ಮತ್ತು ಚೆನ್ನಯ ಜೋಡಿ ಸುಭಾಷ್‌ ಪಡಿವಾಳ ಮತ್ತು ವಾಮನ್‌ ರಾಜ್‌ ಜೋಡಿಯನ್ನು ತುಳುನಾಡು ಇನ್ನೂ ಮರೆತಿಲ್ಲ!

ನಾನು ನನ್ನ ಜೀವನದಲ್ಲಿ ನೋಡಿದ ಮೊದಲ ಚಲನಚಿತ್ರ ತುಳುವಿನ ಕೋಟಿ ಚೆನ್ನಯ. ಐವರ್ನಾಡು ಶಾಲೆಯಲ್ಲಿ ಸೆಲ್ಯೂಲಾಯ್ಡ್ ರೀಲ್ ಮೂಲಕ ಬಿಳಿ ಪರದೆಯ ಮೇಲೆ ಕೋಟಿ ಚೆನ್ನಯ ಸಿನೆಮಾವನ್ನು ಶಾಲೆಯ ಮಕ್ಕಳಿಗೆ ತೋರಿಸಲಾಯಿತು. ಆಗ ಶಾಲೆಯ ಮುಖ್ಯೋಪಧ್ಯಾಯರಾಗಿದ್ದ ಮೊತ್ತೆಮನೆ ವೀರಪ್ಪ ಗೌಡರು ಎಲ್ಲಾ ಮಕ್ಕಳಿಂದ ಐದೈದು ರೂಪಾಯಿ ಸಂಗ್ರಹಿಸಿ ಈ ಚಿತ್ರವನ್ನು ತೋರಿಸಿದ್ದರು.

ಬಹುಶಃ ನಾನು ಆಗ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದೆ ಅನ್ನಿಸುತ್ತದೆ. ದೇಯಿ ಬೈದ್ಯೇತಿ ಅವಳಿ ಶಿಶುಗಳನ್ನು ಬಿಟ್ಟು ಕೆರೆಗೆ ಬಟ್ಟೆ ತೊಳೆಯಲು ಹೋಗುವಾಗ ತೆಂಗಿನ ಮಡಲ್ ಬಿದ್ದು ಸಾಯುವ ದೃಶ್ಯ ನನ್ನನ್ನು ಆಗಲೇ ಕಾಡಿತ್ತು. ಇದಾದ ಮೇಲೆ ನಾನು ಈ ಚಲನಚಿತ್ರವನ್ನು ಎರಡು ಬಾರಿ ನೋಡಿದ್ದೇನೆ.

ಇಂದಿನ ತುಳುವಿಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂಬ ಹೋರಾಟದ ಮೂಲ ಮೂವತ್ತರ ತಶಕದಲ್ಲಿ ಎಸ್ ಯು ಪನಿಯಾಡಿ, ಪೊಳಲಿ ಶೀನಪ್ಪ ಹೆಗ್ಗಡೆ ಮೊದಲಾದವರ ನೇತೃತ್ವದಲ್ಲಿ “ತುಳುವ ಮಹಾಸಭಾ” ಮೂಲಕ ಉಡುಪಿಯಲ್ಲಿ ಆರಂಭ ಆದಾಗ ಪನಿಯಾಡಿಯವರಿಗೆ ತುಳುವಿಗೆ ಸಾಹಿತ್ಯ ಇಲ್ಲ ಎಂಬ ಅಪನಂಬಿಕೆ ಹಬ್ಬುತ್ತಿದ್ದ ಬಗ್ಗೆ ತೀವ್ರವಾದ ಅಸಮಾಧಾನ ಇತ್ತು. ಹೀಗಾಗಿ ಅವರು ತುಳುವ ಸಾಹಿತ್ಯ ಮಾಲೆ ಆರಂಭಿಸಿದ್ದರು. ಈ ಪ್ರಕಾಶನದ ಅಡಿಯಲ್ಲಿ ನೂರಾರು ತುಳು ಕೃತಿಗಳು, ನಾಟಕಗಳು, ಯಕ್ಷಗಾನ ಕೃತಿಗಳು ಪ್ರಕಟಣೆಯಾದವು. ಮೊನ್ನೆ ಮೊನ್ನೆಯ ತನಕ ನಮ್ಮ ದೊಡ್ಡಪ್ಪ ಒಬ್ಬರ ಬಳಿ ಈ ಪ್ರಕಾಶನದ ಯಕ್ಷಗಾನ ಕೃತಿಗಳು ಇದ್ದವು. ಅದನ್ನು ಫೇಸ್ಬುಕ್ ನಲ್ಲಿ ಒಮ್ಮೆ ಹಾಕಿದ್ದೆ ಕೂಡ.

ಹೀಗೆ ಆರಂಭವಾದ ತುಳು ಚಳುವಳಿಗೆ ಸಾಹಿತ್ಯಕ ಮತ್ತು ಸೃಜನಶೀಲ ಸ್ವರೂಪ ಒದ್ದರಿಂದ ತುಳುವಿನಲ್ಲಿ ಅಪೂರ್ವ ಕೃತಿಗಳು ಬಂದವು. ಪೊಳಲಿ ಶೀನಪ್ಪ ಹೆಗ್ಗಡೆ ಮೊದಲಾದ ದೇಸೀ ಚರಿತ್ರೆಕಾರರು ಹುಟ್ಟಿಕೊಂಡರು. ಯಕ್ಷಗಾನ ಕೃತಿಗಳು, ನಾಟಕಗಳು ಬಂದವು. ಈ ಚಳುವಳಿ ಪ್ರತ್ಯೇಕ ತುಳು ರಾಜ್ಯದ ಬೇಡಿಕೆಗಾಗಿ ಹುಟ್ಟಿಕೊಂಡರು ತುಳು ಸಾಹಿತ್ಯ ಸಂಸ್ಕೃತಿ ಚರಿತ್ರೆಯ ಚರ್ಚೆಯನ್ನು ವಿಪುಲವಾಗಿ ಬೆಳೆಸಿತು. ಆದರೆ ಪಣಿಯಾಡಿಯವರು ಮದರಾಸಿಗೆ ಹೋದ ಮೇಲೆ ಈ ಚಳುವಳಿ ಕುಂಠಿತವಾದರೂ ಶೀನಪ್ಪ ಹೆಗ್ಗಡೆಯವರು 1948ರ ತನಕ ನಡೆಸಿಕೊಂಡು ಬಂದರು.

ಕೆಲವು ದಿನಗಳಿಂದ ತುಳುವಿಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂಬ ಅಗ್ರಹದೊಂದಿಗೆ ಹುಟ್ಟಿಕೊಂಡ ಟ್ವಿಟರ್ ಅಭಿಯಾನವನ್ನು ಗಮನಿಸಿ ತುಳು ಭಾಷೆಯ ಚಳುವಳಿಯ ಬಗ್ಗೆ ಬರೆಯಲು ಶುರು ಮಾಡಿದ್ದೇನೆ. ನನಗೆ ಈಗಿನ ಅಭಿಯಾನದ ಬಗ್ಗೆ ತೀವ್ರವಾದ ಅನುಮಾನ ಇದೆ. ಇದಕ್ಕೆ ನಮ್ಮ ಹಿರಿಯರು ಕಟ್ಟಿಕೊಂಡಿದ್ದ ಸಾಹಿತ್ಯಿಕ ಸ್ವರೂಪ ಇಲ್ಲ. ತುಳುವಿನ ಬಗೆಗಿನ ಅಕಾಡೆಮಿಕ್ ಚರ್ಚೆ ಕೆಲವು ದಶಕಗಳಿಂದ ನಿಂತೇ ಹೋದ ಹಾಗಿದೆ. ಇದಕ್ಕೆ ಮುಖ್ಯ ಕಾರಣ ಕರಾವಳಿಯ ಉದ್ದಕ್ಕೂ ಕೋಮುವಾದದ ಬೇರು ಹರಡಿರುವುದು, ಮತ್ತು ದಕ್ಷಿಣ ಕನ್ನಡಕ್ಕೆ ಬೆಂಕಿ ಹಾಕುತ್ತೇವೆ ಎಂಬ ಅಪ್ರಭುದ್ದ ಮೂರ್ಖ ನಾಯಕರು ತುಳುವನ್ನು ದುರ್ಬಲವಾಗಿ ಪ್ರತಿನಿಧಿಸಿರುವುದು.

ಪಣಿಯಾಡಿಯವರ ಚಳುವಳಿಯ ಮುಂದುವರಿದ ಕೊಡುಗೆಯಾಗಿ ತುಳುವ ಅವಳಿ ವೀರರಾದ ಕೋಟಿ ಚೆನ್ನಯ್ಯರ ಬದುಕನ್ನು ಅದಾರಿಸಿ ಯಕ್ಷಗಾನ ಕೃತಿಗಳು, ನಾಟಕ ಮತ್ತು ಸಿನೆಮಾ ಬಂದಿದ್ದು. ತುಳು ಜಾನಪದದಲ್ಲಿ ನನ್ನನ್ನು ಅತ್ಯಂತ ಕಾಡಿದ ಕಥನಗಳಲ್ಲಿ ಕೋಟಿ ಚೆನ್ನಯರ ಬದುಕೂ ಒಂದು!

ಸಧ್ಯ ಲಭ್ಯ ಇರುವ ಕುಂಬಳೆಯ ಪದಾತಿ ಸುಬ್ಬನ ಪಂಚವಟಿಯಿಂದ ಹಿಡಿದು ಆರಂಭದ ಎಲ್ಲಾ ಯಕ್ಷಗಾನ ಕೃತಿಗಳು ಕನ್ನಡದಲ್ಲಿಯೇ ಇವೆ ಎಂಬುದು ನಮಗೆಲ್ಲಾ ತಿಳಿದಿದೆ. ತುಳುವಿನ ಮೊದಲ ಯಕ್ಷಗಾನ ಕೃತಿ ಪಾರ್ತಿ ಸುಬ್ಬನ ಕೃತಿಯ ಅನುವಾದ “ಪಂಚವಟಿ ವಾಲಿ ಸುಗ್ರೀವರ ಕಾಳಗ”. ಇದನ್ನು 1887ರಲ್ಲಿ ಬಾಯಾರು ಪೆರ್ವಡಿ ಸಂಕಯ್ಯ ಭಾಗವತ ಎಂಬವರು ಬರೆದಿದ್ದಾರೆ. ಇದನ್ನು ಬರೆದದ್ದು ವಿಟ್ಲ ಅರಮನೆಯ ಸ್ತ್ರೀಯರ ರಂಜನೆಗಾಗಿ ಎಂಬ ಪ್ರತೀತಿ ಇದೆ. ಸುಮಾರು 1950ರ ತನಕ ತುಳುವಿನಲ್ಲಿ ಬಂದ ಯಕ್ಷಗಾನ ಕೃತಿಗಳ ಸಂಖ್ಯೆ ಅತ್ಯಂತ ಕಡಿಮೆ. ಆಮೇಲೆ ಬಂದಿದ್ದು 1920ರ ದಶಕದಲ್ಲಿ ಬದಕಬೈಲು ತ್ಯಾಂಪಣ್ಣ ಶೆಟ್ಟಿ ಬರೆದ ‘ ತುಳು ಕಿಟ್ನ ರಾಜಿ ಪರ್ಸಂಗೊ”.

ಕೋಟಿ ಚೆನ್ನಯ ಎಂಬ ಯಕ್ಷಗಾನ ಮೊದಲು ರಚನೆಯಾಗಿದ್ದು 1939ರಲ್ಲಿ. ಇದನ್ನು ಬರೆದವರು ಪಂದಬೆಟ್ಟು ವೆಂಕಟರಾಯರು. ಇದು ತುಳು ಸಂಸ್ಕೃತಿಗೆ ಸಂಬಂಧಿಸಿ ಬಂದ ಮೊದಲ ಯಕ್ಷಗಾನ ಕೃತಿ. ಕನ್ನಡ ಭಾಷೆಯಲ್ಲಿ ಇದ್ದ ಈ ಕೃತಿಯ ರಂಗ ಪ್ರಯೋಗ ಕೂಡ ಆರಂಭದಲ್ಲಿ ಕನ್ನಡದಲ್ಲಿಯೇ ಇತ್ತು. ಇದರ ನಂತರ ಮಧುಕುಮಾರ್ ನಿಸರ್ಗ ಅವರ ಕೋಟಿ – ಚೆನ್ನಯ್ಯೆ, ಅನಂತರಾಮ ಬಂಗಾಡಿ ಬರೆದ ‘ಪಟ್ಟದ ಪೆರುಮಾಳೆ’ ಎಂಬ ಕೋಟಿ ಚೆನ್ನಯರ ಹುಟ್ಟಿನ ಕಥನ, ಬೈದರ್ಕಳ ಪ್ರತಾಪ ಮೊದಲಾದ ಕೃತಿಗಳು ಬಂದವು.

1967 ರಲ್ಲಿ ವಿಶು ಕುಮಾರ್ ಅವರು ಅವಳಿ ವೀರರ ಕಥನವನ್ನು ಇಟ್ಟುಕೊಂಡು “ಕೋಟಿ ಚೆನ್ನಯ” ನಾಟಕವನ್ನು ಬರೆಯುತ್ತಾರೆ. ಇದಕ್ಕಿಂದ ಮುಂಚೆಯೇ ಕೋಟಿ ಚೆನ್ನಯ ಯಕ್ಷಗಾನಗಳು ಬಂದಿದ್ದವು. ಪಂಜೆ ಮಂಗೇಶರಾಯರು ಕನ್ನಡದಲ್ಲಿ ಮೊದಲ ಬಾರಿಗೆ ಕೋಟಿ ಚೆನ್ನಯರ ಕಥಾ ವಸ್ತುವನ್ನು ಇಟ್ಟುಕೊಂಡು ನೀಳ್ಗತೆ ಬರೆದಿದ್ದರೂ ಅದು ಕನ್ನಡದ್ದಲ್ಲದ ಸಂಸ್ಕೃತಿಯ ಕಥನವಾದ್ದರಿಂದ ತುಳುವಿನ ಸೊಗಡು ಕನ್ನಡದಲ್ಲಿ ಬಾರದು ಎಂದು ಮುನ್ನುಡಿಯಲ್ಲಿ ಹೇಳುತ್ತಾರೆ. ಈ ನಾಟಕ ಕೃತಿಯನ್ನು ಸ್ವತಃ ನಾಟಕಕಾರರೇ ಪ್ರಕಟಿಸುತ್ತಾರೆ.

ಹೀಗೆ ಮೌಖಿಕ ಪರಂಪರೆಯಿಂದ ಬಂದ ಪಾಡ್ದನ ಕೃತಿ ಆರಾಧನೆಯ ಸ್ವರೂಪ ಪಡೆದು ಅಲ್ಲಿ ನಂಬಿಕೆಯೊಂದಿಗೆ ಮಿಲಿತವಾದ ದೈವಾರಾಧನೆಯಂತಹ ಆರಾಧನೆಯ ನರ್ತನವಾಗಿ ಜನಮಾನಸದಲ್ಲಿ ಉಳಿದುಕೊಂಡು ಯಕ್ಷಗಾನ ಎಂಬ ಪ್ರದರ್ಶನ ಕಲೆಯಲ್ಲಿ ಗಟ್ಟಿಯಾಗುತ್ತದೆ. ಮುಂದೆ ನಾಟಕವಾಗಿ ಬೆಳೆದು ಸಿನೆಮಾದ ತನಕ ಬಂದ ಒಟ್ಟಾರೆ ಬೆಳವಣಿಗೆ ಈ ಜಾನಪದ ಕಥನಕ್ಕೆ ಇರುವ ಶಕ್ತಿಯನ್ನು ತೋರಿಸುತ್ತದೆ.

ವಿಶುಕುಮಾರ್ ಹೇಳುವಂತೆ ಕನ್ನಡದಲ್ಲಿ ತುಳುವಿನ ಸೊಗಡನ್ನು ಕಟ್ಟಲು ಸಾಧ್ಯ ಇಲ್ಲ ಎಂಬ ನಿಲುವು ನನಗೆ ಅವರಲ್ಲಿ ಇದ್ದ ಅಕಾಡೆಮಿಕ್ ಚಿಂತನೆಗೆ ಮತ್ತು ಹೊಸತನಕ್ಕೆ ತೆರೆದುಕೊಳ್ಳುವ ಪ್ರಭುದ್ಧತೆಯಾಗಿ ಕಂಡುಬರುತ್ತದೆ. ಹೀಗಾಗಿ ಇವರು ಕೋಟಿ ಚೆನ್ನಯ ಎಂಬ ಸಿನಿಮಾ ಮಾಡಲು ಸಾಧ್ಯವಾಯಿತು.

ಸಾಂಪ್ರದಾಯಿಕವಾಗಿ ಕಟ್ಟಲ್ಪಟ್ಟ ಯಕ್ಷಗಾನದಲ್ಲಿ ಸಾಧ್ಯವಾಗದ ತುಳುವಿನ ಸಹಜ ಬದುಕಿನ ಪ್ರತಿನಿಧೀಕರಣವನ್ನು ಮಿತಿಗಳ ಜೊತೆ ಜೊತೆಗೆ ರಂಗದ ಮೇಲೆ ಕೊಂಚ ವಿಸ್ತರಿಸಿ ಅದನ್ನು ಸಿನೆಮಾದಲ್ಲಿ ಪೂರ್ಣವಾಗಿ ಕಟ್ಟಲು ವಿಶುಕುಮಾರ್ ಪ್ರಯತ್ನಿಸುತ್ತಾರೆ.

ತಾವೇ ಬರೆದ ನಾಟಕವನ್ನು ಮುದ್ದು ಸುವರ್ಣ ಅವರ ‘ಪ್ರಜಾ ಫಿಲಂಸ್’ ಬ್ಯಾನರ್ ನ ಅಡಿಯಲ್ಲಿ ವಿಶು ಕುಮಾರ್ ಕೋಟಿ ಚೆನ್ನಯ ಸಿನೆಮಾ ಮಾಡುತ್ತಾರೆ. ಕೋಟಿ ಚೆನ್ನಯ ಪಾತ್ರ ಮಾಡಿದ ಕಲಾವಿದರಾದ ಸುಭಾಷ್ ಪಡಿವಾಳ ಮತ್ತು ವಾಮನ್ ರಾಜ್ ಜೋಡಿ ಸಿನೆಮಾದಲ್ಲಿ ಮಿಂಚುತ್ತದೆ.

ಎಕ್ಕ ಸಕ್ಕಾ…ಎಕ್ಕ ಸಕ್ಕಾ….ಎಕ್ಕ ಸಕ್ಕಲಾ….ಅಕ್ಕಾ ಪಂಡುದ್ ಲೆಪ್ಪುಣಕುಳು ಬತ್ತೆರಿತ್ತೆಲಾ…ಎಂಬ ಪ್ರೋ. ವಿವೇಕ್ ರೈಗಳು ಬರೆದ ಹಾಡು, ಹಿರಿಯ ವಿದ್ವಾಂಸ ಅಮೃತ ಸೋಮೇಶ್ವರ ಅವರು ಬರೆದ, ಪಿ ಬಿ ಶ್ರೀನಿವಾಸ್ ಹಾಡಿದ “ಜೋಡು ನಂದಾ ದೀಪ ಬೆಳಗುಂಡ್ ತುಳುವ ನಾಡುದ ಗುಂಡೊಡು…..” ಹಾಡುಗಳನ್ನು ತುಳುವರು ಎಂದೂ ಮರೆಯಲು ಸಾಧ್ಯವಿಲ್ಲ.

ಎಸ್ ಜಾನಕಿ ಹಾಡಿದ ಎಕ್ಕಸಕ್ಕಾ ಹಾಡಿನಲ್ಲಿ ತನ್ನ ತಮ್ಮಂದಿರು ಮನೆಗೆ ಬಂದ ಸಂಭ್ರಮದಲ್ಲಿ ಹಾಡಿ ಕುಣಿಯುವ ಕಿನ್ನಿದಾರು ಪಾತ್ರದಾರಿ “ಮಿನುಗುತಾರೆ ಕಲ್ಪನಾ” ಹಾಡಿನ ಸೌಂದರ್ಯವನ್ನು ಹೆಚ್ಚಿಸುತ್ತಾರೆ.

ಇಂದಿಗೂ ಈ ಸಿನೆಮಾದ ಒಂದು ಡೈಲಾಗ್ “ಸತ್ಯಡ್ ಬತ್ತಿನಕುಳೆಗ್ ತಿಗಳೆಡ್ ಸಾದಿ ಕೊರ್ಪ, ಅನ್ಯಾಯಡ್ ಬಟ್ಟಿನಕುಳೆಗ್ ಸುರ್ಯೆಡ್ ಸಾದಿಕೊರ್ಪ…(ಸತ್ಯದಲ್ಲಿ ಬಂದವರಿಗೆ ಎದೆಯಲ್ಲಿ ದಾರಿ ಕೊಡುತ್ತೇವೆ, ಅನ್ಯಾಯದಲ್ಲಿ ಬಂದವರಿಗೆ ಸುರಗಿಯಲ್ಲಿ -ಎರಡೂ ಕಡೆ ಹರಿತವಾಗಿರುವ ಆಯುಧ – ದಾರಿ ಕೊಡುತ್ತೇವೆ” ಸ್ವತಃ ಕೋಟಿ ಚೆನ್ನಯರೇ ಹೇಳಿದ್ದಾರೆ ಎಂಬಂತೆ ಹೇಳಿಕೊಂಡು ಭಾವುಕರಾಗುವ ತುಳುವರು ಇದ್ದಾರೆ.

ಕಾರ್ಕಳದ ಬಾರಾಡಿ ಬೀಡು, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಪಡುಬಿದ್ರಿ ಹಾಗೂ ಕ್ಲೈಮ್ಯಾಕ್ಸ್ ನ ಕಾಳಗವನ್ನು ಕಾರ್ಕಳದ ಬೈಲೂರಿನಲ್ಲಿ ಚಿತ್ರೀಕರಿಸಲಾಯಿತು. ಮಂಗಳೂರಿನ ಜ್ಯೋತಿ ಥಿಯೇಟರ್ ನಲ್ಲಿ 150 ದಿನಗಳು, ಉಡುಪಿಯ ಅಲಂಕಾರ ಥಿಯೇಟರ್ ನಲ್ಲಿ 125 ದಿನಗಳ ಕಾಲ, ಮೂಡುಬಿದರೆ ಮತ್ತು ಪುತ್ತೂರಿನಲ್ಲಿ 75 ದಿನಗಳ ಕಾಲ, ಮುಂಬೈ ನಲ್ಲಿ ಒಂದು ತಿಂಗಳು ಈ ಚಿತ್ರ ಯಶಸ್ವಿ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು.

ಚಿತ್ರದ ತಾರಾಬಳಗದಲ್ಲಿ ಮಿನುಗುತಾರೆ ಕಲ್ಪನಾ, ಲೋಕಯ್ಯ ಶೆಟ್ಟಿ, ಕುದ್ಕಾಡಿ ವಿಶ್ವನಾಥ ರೈ, ಫೈಟರ್ ಶೆಟ್ಟಿ, ಚೆನ್ನಪ್ಪ ಸುವರ್ಣ, ಆನಂದ ಗಾಣಿಗ ಮೊದಲಾದವರು ಇದ್ದರು.

ರಾಜ್ಯ ಸರಕಾರದ ಆ ವರ್ಷದ ನಾಲ್ಕನೇ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಕೋಟಿ ಚೆನ್ನಯ ಚಲನಚಿತ್ರಕ್ಕೆ ಸಂದಿತು.

2007ರಲ್ಲಿ ಇದೇ ಕಥಾವಸ್ತುವನ್ನು ಇಟ್ಟುಕೊಂಡು ಆನಂದ್ ಪಿ ರಾಜು ನಿರ್ದೇಶನದ ಬಾಲಕೃಷ್ಣ ಶೆಟ್ಟಿ, ಶೇಖರ್ ಕೋಟ್ಯಾನ್, ವಿನಯ ಪ್ರಸಾದ್, ನೀತು ಅಭಿಯಾನದ ‘ಕೋಟಿ ಚೆನ್ನಯ’ ಸಿನೆಮಾ ಬಂತು. ಆದರೆ ವಿಶು ಕುಮಾರ್ ಅವರ ಕೋಟಿ ಚೆನ್ನಯ ಸಿನೆಮಾ ತುಳುವರ ಮನಸ್ಸಲ್ಲಿ ಅಮರವಾಗಿ ಉಳಿದುಕೊಳ್ಳುತ್ತದೆ.

ಚರಣ್ ಐವರ್ನಾಡು
Charan Aivarnad


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »