ಸ್ವಂತ ಮಕ್ಕಳನ್ನು ಹೆತ್ತು ತಾಯಿಯಾಗುವುದಕ್ಕಿಂತ, ಸಾಮಾಜಿಕವಾಗಿ ತಾಯಿಯಾದವರು ಎಲ್ಲ ತಾಯಿಯಂದಿರಿಗಿಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ. ಅಂಥ ವಿಶಾಲ ಹೃದಯಿ ಲೀಲಾವತಿ ಜಯ ಸುವರ್ಣರು. ಜಗತ್ತಿನ ಬಹುತೇಕ ಸಾಧಕರ ಸಾಧನೆಯಲ್ಲಿ ಅದೆಷ್ಟೋ ಮಹಿಳೆಯರ ತ್ಯಾಗವಿದೆ, ಸಹನೆಯಿದೆ, ಸಮರ್ಪಣೆಯಿದೆ, ಪ್ರೀತಿ ಪ್ರೋತ್ಸಾಹಗಳಿವೆ. ಬಿಲ್ಲವ ಸಮಾಜದ ಅಭಿವೃದ್ಧಿಯ ರೂವಾರಿ ಸನ್ಮಾನ್ಯ ಜಯ ಸಿ. ಸುವರ್ಣರ ಸಮಾಜಪರ ಕೆಲಸ ಕಾರ್ಯಗಳಿಗೆ ಶಕ್ತಿಯಾಗಿ ನಿಂತವರು ಲೀಲಾವತಿಯವರು. ಈ ದಂಪತಿ ಸಮಾಜ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ ಅನುಸರಿಸಿದವರು. ಪರರ ಒಳಿತಿನಲ್ಲಿಯೇ ಖುಷಿಯನ್ನು ಕಂಡವರು. ಭಾರತೀಯ ಪರಂಪರೆಯ “ಅತಿಥಿ ದೇವೋ ಭವ” ಎಂಬ ಘೋಷ ವಾಕ್ಯಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಬಾಳಿದವರು. ಸಾಮಾಜಿಕ ಜವಾಬ್ದಾರಿಯನ್ನು ಜೀವನದುದ್ದಕ್ಕೂ ಸಮರ್ಥವಾಗಿ ನಿರ್ವಹಿಸಿದವರು. ಜಯ ಸುವರ್ಣರ ಜೀವನದಲ್ಲಿ ಲೀಲಾವತಿಯವರು ವರವಾಗಿಯೇ ಬಂದಿದ್ದಾರೆ ಎಂದರೆ ತಪ್ಪಾಗಲಾರದು.
ಲೀಲಾವತಿ ಜಯ ಸುವರ್ಣರು 1948ರಲ್ಲಿ ಜನಿಸಿದರು. ಪಡುಬಿದ್ರಿ ಪಡುಹಿತ್ಲು ದಿ.ಜಲಜ ಮತ್ತು ಗೋಪಾಲ ಸುವರ್ಣರ ಏಳು ಮಂದಿ ಮಕ್ಕಳಲ್ಲಿ ಇವರು ಮೂರನೆಯವರು. ಇವರು ಜಯ ಸುವರ್ಣರಿಗೆ ಅನುರೂಪದ ಬಾಳಸಂಗಾತಿ. ಪತಿಯನ್ನೇ ದೇವರು ಎಂದುಕೊಂಡು, ಅವರಿಗಿಂತ ಮಿಗಿಲಾದುದು ತನಗೇನು ಇಲ್ಲ! ಎಂಬಷ್ಟು ತಮ್ಮನ್ನು ಅರ್ಪಿಸಿಕೊಂಡಿದ್ದರು. ಸುವರ್ಣರ ಬಾಳಿನಲ್ಲಿ ಹೊಸದೊಂದು ಬದಲಾವಣೆಯನ್ನೂ ತಂದವರು. ತಮ್ಮ ಮನೆಗೆ ಬಂದು ಹೋಗುತ್ತಿದ್ದವರನ್ನೆಲ್ಲ ನಗುಮುಖದಿಂದ ಸ್ವಾಗತಿಸುತ್ತಿದ್ದ ಇವರು ಸಹಸ್ರಾರು ಮಂದಿಗೆ ತಾಯಿಯಾದವರು. ಜಯ ಸುವರ್ಣರ ಕುಟುಂಬಕ್ಕೆ ಆಪ್ತರಾಗಿದ್ದವರು, ‘ಜಯ ಸುವರ್ಣರು ಹೇಗಿದ್ದರೋ ಅವರ ಪತ್ನಿ ಲೀಲಕ್ಕ ಕೂಡಾ ಹಾಗೆಯೇ. ನಮ್ಮನ್ನು ನಗುನಗುತ್ತ ಮಾತಾಡಿಸಿ ಪ್ರೀತಿಯಿಂದ ಉಪಚರಿಸುತ್ತಿದ್ದರು. ಮನೆಯಲ್ಲಿ ರೊಟ್ಟಿ, ಕಡುಬು, ಇಡ್ಲಿ ಅಥವಾ ಬೇರೇನೇ ತಿಂಡಿತಿನಿಸುಗಳಿರಲಿ, ಮನೆಗೆ ಬಂದವರಿಗೆಲ್ಲ ಪ್ರೀತಿಯಿಂದ ನೀಡುತ್ತಿದ್ದರು. ಹಾಗಾಗಿ ಆ ಮನೆಯು ನಮ್ಮದೇ ಮನೆ ಎಂಬಷ್ಟು ಆಪ್ತವಾಗುತ್ತಿತ್ತು. ಪರಕೀಯ ಭಾವವೆಂದೂ ಮೂಡಿದ್ದಿಲ್ಲ. ಅವರಲ್ಲೂ ಹಾಗೆಯೇ, ಯಾರೋ ಹೊರಗಿನವರು ಬಂದಿದ್ದಾರೆ ಅನ್ನುವ ಭಾವವೇ ಇರುತ್ತಿರಲಿಲ್ಲ’ ಎನ್ನುತ್ತಾರೆ. ಹೀಗೆ ಅದೆಷ್ಟೋ ವರ್ಷಗಳಿಂದ ಅನೇಕರ ಹೊಟ್ಟೆಯ ಹಸಿವನ್ನು ನೀಗಿಸುತ್ತಿದ್ದ ಮಹಾತಾಯಿ ಅವರಾಗಿದ್ದರು.
ಶ್ರೀಮಂತಿಕೆ ಇದ್ದರೂ ಮನೆಯಲ್ಲಿ ಯಾವಾಗಲೂ ಲೀಲಾವತಿಯವರದ್ದೇ ಕೈಯಡುಗೆ ಇರುತ್ತಿತ್ತು. ಕುಟುಂಬದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತ ಪತಿಯ ಕಾರ್ಯಗಳಿಗೆ ನೈತಿಕ ಪ್ರೋತ್ಸಾಹವನ್ನು ನೀಡಿದವರು. ತಮ್ಮ ಸುಖಮಯವಾದ ಜೀವನವು ಆ ದೇವರದೇ ಕೃಪೆ ಎನ್ನುತ್ತಿದ್ದರು. ಕೂಡು ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹಿಳೆಯೊಬ್ಬಳು ಮುಂಬ¬ಯಂಥ ಆಧುನಿಕ ನಗರದಲ್ಲೂ ಅದಕ್ಕಿಂತ ಹೆಚ್ಚಿನ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿದ್ದನ್ನು ಗಮನಿಸುವಾಗ ಆ ಮಾತೆಯ ಬಗೆಗೆ ಗೌರವಾಭಿಮಾನಗಳು ಮೂಡುತ್ತವೆ.
ಜಯ ಸುವರ್ಣರು ‘ಬಿಲ್ಲವರ ಎಸೋಸಿಯೇಶನ್ ಮುಂಬಯಿ ’ ಇದರಲ್ಲಿ ಸಕ್ರಿಯರಾದ ಬಳಿಕ ತಮ್ಮ ಸಂಪೂರ್ಣ ಸಮಯವನ್ನು ಸಮಾಜಕ್ಕಾಗಿಯೇ ವಿನಿಯೋಗಿಸುತ್ತಿದ್ದರು. ಅವರು ಪ್ರತಿನಿತ್ಯ ಒಪ್ಪಿಕೊಂಡ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಎಷ್ಟು ತಡವಾಗಿ ಮನೆಗೆ ಬಂದರೂ ಲೀಲಾವತಿಯವರು ಮುನಿಸಿಕೊಂಡವರಲ್ಲ. ಬಿಲ್ಲವ ಸಮಾಜದ ಏಳಿಗೆಯ ಜೊತೆಗೆ ಜಾತಿ ಮತ ಭೇದವಿಲ್ಲದೆ ಅಶಕ್ತರನ್ನು ಪೋಷಿಸುವ ಸುವರ್ಣರ ನಿಲುವನ್ನು ತಾವೂ ಮೆಚ್ಚಿಕೊಂಡು ಜೊತೆಯಾದವರು. ಪತಿಯನ್ನೇ ಸರ್ವಸ್ವವೆಂದುಕೊಂಡು, ‘ಅವರಿಗಿಂತ ಮಿಗಿಲಾದುದು ತನಗೇನು ಇಲ್ಲ’ ಎಂಬಷ್ಟು ತಮ್ಮನ್ನು ಅರ್ಪಿಸಿಕೊಂಡಿದ್ದರು. ಅವರಲ್ಲಿರುವ ಮುಗ್ಧತೆ, ಪ್ರಾಮಾಣಿಕತೆ ಹಾಗೂ ಅತಿಥಿಗಳನ್ನು ಸತ್ಕರಿಸುವ ಸದ್ಗುಣವನ್ನು ತಮ್ಮ ಜೀವಿತಾವಧಿಯವರೆಗೂ ಉಳಿಸಿಕೊಂಡಿದ್ದರು. ಮದುವೆಯಾದ ಮೇಲೆ ಒಂದು ದಿನವೂ ಸುವರ್ಣರನ್ನು ಬಿಟ್ಟಿದ್ದು ಅಭ್ಯಾಸವಿರದ ಲೀಲಾವತಿಯವರಿಗೆ ಪತಿಯ ಅಗಲಿಕೆ ತೀರ ನೋವು ತಂದಿತ್ತು. ಇವರು 2023ರ ಜುಲೈ ಒಂದರಂದು ಅಲ್ಪಕಾಲದ ಅನಾರೋಗ್ಯದಿಂದ ತೀರಿಕೊಂಡರು. ‘ಅವರು ತಾಯಿ ಸಮಾನರು. ಅವರ ಕೈತುತ್ತು ತಿಂದವರು ನಾವು’ ಎಂದು ಲೀಲಾವತಿಯವರನ್ನು ಅದೆಷ್ಟೋ ಮಂದಿ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
ಲೀಲಕ್ಕ ಹಳ್ಳಿಯ ಸಂಪ್ರದಾಯಸ್ಥ ಕುಟುಂಬದಿಂದ ಬಂದವರಾದುದರಿಂದ ನಗರದಲ್ಲಿಯೂ ಅದೇ ಸಂಸ್ಕಾರಯುತ ಜೀವನವನ್ನೇ ಆದರಿಸಿದರು. ಕುಟುಂಬವೇ ತನ್ನ ಪ್ರಪಂಚವೆಂದು ಭಾವಿಸಿ, ಅದರ ಖುಷಿಯಲ್ಲಿಯೇ ತನ್ನ ಆನಂದವನ್ನು ಕಾಣುತ್ತ ಜೀವಿಸಿದರು. ಹೊಟೇಲು ಉದ್ಯಮದ ಕೆಲಸಗಾರರನ್ನೂ ತಮ್ಮ ಮನೆಮಂದಿಯಂತೆಯೇ ಉಪಚರಿಸುವ ಉದಾರ ಮನೋಭಾವ ಲೀಲಾವತಿವರದ್ದಾಗಿತ್ತು. ಓರ್ವ ಆದರ್ಶ ಗ್ರಹಿಣಿಯಾಗಿ, ಹಳ್ಳಿಯ ಸಂಸ್ಕಾರವನ್ನೇ ಅನುಸರಿಸಿಕೊಂಡು ಬದುಕಿದ್ದು ಅವರ ಹಿರಿತನ. ಹಿರಿಯರಿಂದ ನಮಗೆ ಬಂದಿರುವುದನ್ನು ನಮ್ಮ ಮುಂದಿನ ಪೀಳಿಗೆಗೆ ದಾಟಿಸಿದಲ್ಲಿ ಮಾತ್ರ ಅದೇ ಸಂಸ್ಕಾರ ಮುಂದುವರಿಯಲು ಸಾಧ್ಯವಾಗುತ್ತದೆ. ಮಕ್ಕಳಾದ ಸೂರ್ಯಕಾಂತ್, ಸುಭಾಶ್ ದಿನೇಶ್, ಯೋಗೇಶ್ ಹೀಗೆ ನಾಲ್ಕು ಮಂದಿ ಗಂಡು ಮಕ್ಕಳಿಗೂ ಒಳ್ಳೆಯ ಸಂಸ್ಕಾರವನ್ನು ನೀಡಿ ಬೆಳೆಸಿದ್ದಾರೆ. ಈ ಮೂಲಕ ಇಡೀ ಮಾತೃ ವರ್ಗಕ್ಕೆ ಲೀಲಾವತಿಯವರು ಆದರ್ಶ ಮಾತೆಯಾಗಿದ್ದಾರೆ. ಸಹಸ್ರಾರು ಮಂದಿಯ ಹೃದಯದೇವತೆಯಾಗಿದ್ದಾರೆ.
✍🏻 ಅನಿತಾ ಪಿ.ತಾಕೊಡೆ